ADVERTISEMENT

ಸ್ವಸ್ತಿಕ್-ಪೀಣ್ಯ ಮೆಟ್ರೊ ವಿಳಂಬ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST
ಸ್ವಸ್ತಿಕ್-ಪೀಣ್ಯ ಮೆಟ್ರೊ ವಿಳಂಬ
ಸ್ವಸ್ತಿಕ್-ಪೀಣ್ಯ ಮೆಟ್ರೊ ವಿಳಂಬ   

ಬೆಂಗಳೂರು: `ಈ ವರ್ಷದ ಡಿಸೆಂಬರ್ ವೇಳೆಗೆ ಸ್ವಸ್ತಿಕ್ ಮತ್ತು ಪೀಣ್ಯ ನಡುವಿನ ಮಾರ್ಗದಲ್ಲಿ ಮೆಟ್ರೊ ರೈಲು ಓಡಾಟದ ಆರಂಭಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ ಭೂ ಸ್ವಾಧೀನ ವಿಚಾರಕ್ಕೆ ಸಂಬಧಿಸಿದ ಕಾನೂನು ತೊಡಕುಗಳ ಕಾರಣದಿಂದ ವರ್ಷಾಂತ್ಯಕ್ಕೆ ಈ ಭಾಗದಲ್ಲಿ ರೈಲು ಓಡಿಸಲು ಸಾಧ್ಯವಾಗದೇ ಇರಬಹುದು~ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮವು ಅನುಮಾನ ವ್ಯಕ್ತಪಡಿಸಿದೆ.

`ಯಶವಂತಪುರದ ಬಳಿಯ ಸಾಬೂನು ಕಾರ್ಖಾನೆಯ ಬಳಿಯ ನಮ್ಮ ಮೆಟ್ರೊ ನಿಲ್ದಾಣಕ್ಕೆ ಜಾಗವನ್ನು ವಶ ಪಡಿಸಿಕೊಳ್ಳುವ ಸಂಬಂಧ ಇನ್ನೂ ಕಾನೂನು ಸಮಸ್ಯೆಗಳು ಇವೆ. ಇದರಿಂದ ನಿಲ್ದಾಣ ಕಾಮಗಾರಿ ಮೂರು ವರ್ಷಗಳಿಂದಲೂ ಕುಂಟುತ್ತಾ ಸಾಗಿದೆ. ಇದರಿಂದ ಹಳಿ ಅಳವಡಿಕೆ, ದೂರ ಸಂಪರ್ಕ ಹಾಗೂ ಸಿಗ್ನಲ್‌ಗಳ ಕಾರ್ಯಾಚರಣೆ ವ್ಯವಸ್ಥೆ ಸೇರಿದಂತೆ ಎಲ್ಲ ಕಾಮಗಾರಿಗಳು ವಿಳಂಬವಾಗುತ್ತಿವೆ~ ಎಂದು ನಿಗಮವು ತನ್ನ ವಾರ್ತಾಪತ್ರದಲ್ಲಿ ಹೇಳಿಕೊಂಡಿದೆ.

`ಪೂರ್ವ ಮತ್ತು ಪಶ್ಚಿಮ ಕಾರಿಡಾರ್‌ನಲ್ಲಿ ವಿಧಾನಸೌಧದ ಮುಂಭಾಗ ನೆಲದಡಿಯ ನಿಲ್ದಾಣ ಕಾಮಗಾರಿ ಕೂಡ ತಡವಾಗುತ್ತಿದೆ. ಇದಕ್ಕೆ ಸೌಧದ ಮುಂದಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಿಸದೇ ಇರುವುದೇ ಮುಖ್ಯ ಕಾರಣ. ಪ್ರತಿಮೆ ಸ್ಥಳಾಂತರದ ವಿಷಯದಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ಕಾಯಲಾಗುತ್ತಿದೆ. ಕಳೆದ ನಾಲ್ಕು ತಿಂಗಳಿನಿಂದ ಪ್ರತಿಮೆಯಿಂದಾಗಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ~ ಎಂದು ನಿಗಮವು ತನ್ನ ಅಸಹಾಯಕತೆ ವ್ಯಕ್ತಪಡಿಸಿದೆ.

`ಮಲ್ಲೇಶ್ವರದಲ್ಲಿ ಮಂತ್ರಿ ಮಾಲ್‌ನ ಹಿಂಬದಿಯಲ್ಲಿ ರೈಲ್ವೆ ಮಾರ್ಗದ ಪಕ್ಕದಲ್ಲಿ ಮೆಟ್ರೊ ಎತ್ತರಿಸಿದ ಮಾರ್ಗಕ್ಕಾಗಿ ಕಾಂಕ್ರಿಟ್ ಬ್ಲಾಕ್‌ಗಳನ್ನು ಜೋಡಿಸುವ ಕಾರ್ಯಕ್ಕೆ ರೈಲ್ವೆ ಸುರಕ್ಷಾ ಆಯುಕ್ತರು ಇನ್ನು ನಿರಾಪೇಕ್ಷಣಾ ಪತ್ರ ಸಲ್ಲಿಸಿಲ್ಲ. ನಿಲ್ದಾಣಗಳ ವಿನ್ಯಾಸ ಹಾಗೂ ಇನ್ನಿತರ ಕಾಮಗಾರಿಗಳ ವರದಿಯ ಬಗ್ಗೆ 2011 ರ ಏಪ್ರಿಲ್‌ನಿಂದಲೂ ಕೇಂದ್ರ ರೈಲ್ವೆ ಸಚಿವಾಲಯ ಅನುಮೋದನೆ ನೀಡಿಲ್ಲ. ಹೀಗಾಗಿ ಕಾಲಕ್ಕೆ ಸರಿಯಾಗಿ ಮಾರ್ಗದ ಓಡಾಟ ಸಾಧ್ಯವಾಗುವುದಿಲ್ಲ~ ಎಂದು ನಿಗಮವು ತಿಳಿಸಿದೆ.

`ನಗರ ರೈಲು ನಿಲ್ದಾಣದ ಬಲ ಬದಿಯಲ್ಲಿ ರೈಲ್ವೆ ಇಲಾಖೆಗೆ ಸೇರಿದ ಮೇಲ್ವಿಚಾರಕರ ತರಬೇತಿ ಕೇಂದ್ರದ (ಎಸ್‌ಟಿಸಿ) ಜಾಗದಲ್ಲಿ ಮೆಟ್ರೊ ಕಾಮಗಾರಿ ನಡೆಸಲು ಇನ್ನು ಅನುಮತಿ ಸಿಕ್ಕಿಲ್ಲ. ರೈಲ್ವೆ ಜಾಗ ಹಸ್ತಾಂತರದ ಬಗ್ಗೆ ಕೇಂದ್ರ ಸರ್ಕಾರ ಸದ್ಯದಲ್ಲೇ ಹೊಸ ನೀತಿ ಮತ್ತು ಮಾರ್ಗಸೂಚಿಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ನಂತರದಲ್ಲಿ ಮೆಟ್ರೊ ಕಾಮಗಾರಿಗೆ ಹಸಿರು ನಿಶಾನೆ ದೊರೆಯುವ ಸಂಭವ ಇದೆ~ ಎಂದು ನಿಗಮವು ಆಶಾಭಾವನೆ ವ್ಯಕ್ತಪಡಿಸಿದೆ.

`ಮೆಜೆಸ್ಟಿಕ್‌ನಲ್ಲಿ ನೆಲದಡಿಯಲ್ಲಿ ನಿರ್ಮಾಣವಾಗುವ ಎರಡು ಹಂತದ ಮೆಟ್ರೊ ನಿಲ್ದಾಣಗಳ ಕಾಮಗಾರಿಗೆ ಮೂರು ತಿಂಗಳ ಒಳಗೆ ಚಾಲನೆ ನೀಡಲಾಗುವುದು~ ಎಂದು ತಿಳಿಸಿದೆ.

ಭರ್ಜರಿ ಆದಾಯ
`ನಮ್ಮ ಮೆಟ್ರೊ~ದ ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗಿನ ರೀಚ್- 1ರ ಮಾರ್ಗದಲ್ಲಿ ರೈಲು ಸಂಚಾರ ಪ್ರಾರಂಭವಾಗಿ ಜನವರಿ 27ಕ್ಕೆ 100 ದಿನಗಳು ಕಳೆದಿದ್ದು, ಆ ಅವಧಿಯಲ್ಲಿ ಸುಮಾರು 30 ಲಕ್ಷ ಜನರು ಪ್ರಯಾಣಿಸಿದ್ದಾರೆ. ನಿಗಮಕ್ಕೆ 4.5 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.