
ಬೆಂಗಳೂರು: ‘ಸಮಾನತೆಯ ನೆಲೆಯಲ್ಲಿ ಚಿಂತಿಸುವ ಬರಹಗಾರರು ಸ್ವಾತಂತ್ರ್ಯದ ಜತೆಗೆ ಸ್ವವಿಮರ್ಶೆಯ ನಿಲುವು ಹೊಂದುವುದು ಅಗತ್ಯ’ ಎಂದು ಹಿರಿಯ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಅಭಿಪ್ರಾಯಪಟ್ಟರು. ವಿಕಾಸ ಪ್ರಕಾಶನವು ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಶನಿವಾರ ಆಯೋಜಿಸಿದ್ದ ವಿವಿಧ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪುರುಷ ಜಗತ್ತಿನಲ್ಲಿ ತನ್ನ ಅಸ್ಮಿತೆಗಾಗಿ ಹೋರಾಡುವ ಸ್ತ್ರೀವಾದ ನೆಲೆಯ ಬರಹಗಾರರು ಸ್ವಾತಂತ್ರ್ಯದ ಜತೆಯಲ್ಲಿಯೇ ಸ್ವವಿಮರ್ಶೆಗೆ ಒಳಪಡಬೇಕು ಎಂಬುದು ಸುಮಿತ್ರಾಬಾಯಿ ಅವರ ನಿಲುವು. ಇದು ಎಲ್ಲ ಬರಹಗಾರರಿಗೂ ಅನ್ವಯಿಸುತ್ತದೆ’ ಎಂದು ಪ್ರತಿಪಾದಿಸಿದರು.
‘ಸ್ತ್ರೀವಾದದ ಮೂಲನೆಲೆಗಳು ಸುಮಿತ್ರಾಬಾಯಿ ಅವರ ಬೊಗಸೆಯಲ್ಲಿವೆ.
ಸ್ತ್ರೀ ಪುರುಷರ ನಡುವಿನ ಬಿಕ್ಕಟ್ಟು ಎಲ್ಲೆಡೆ ಇದೆ. ಹಾಗಾಗಿ ಸ್ತ್ರೀವಾದ ವ್ಯಾಪಕವಾಗಿದ್ದರೂ, ಅದನ್ನು ಸ್ಥಳೀಯ ದೃಷ್ಟಿಕೋನದಿಂದ ತರ್ಕಿಸುವ ಅಗತ್ಯವಿದೆ’ ಎಂದು ಹೇಳಿದರು. ಹಿರಿಯ ಪತ್ರಕರ್ತ ಎಚ್.ಎನ್.ಆನಂದ, ‘ಹಾಸ್ಯ ಸಾಹಿತ್ಯ ಸತ್ತಿಲ್ಲ. ಆದರೆ, ಅದರ ಗುಣಮಟ್ಟ ಕುಸಿಯುತ್ತಿದೆ ಎಂಬುದಕ್ಕೆ ಈಗಿನ ಹಾಸ್ಯಲೇಖನಗಳೇ ಸಾಕ್ಷಿ’ ಎಂದು ಹೇಳಿದರು.
‘ಸದಾಶಿವ ಅವರ ‘ವಾರೆನೋಟ’ ಅಂಕಣ ಬರಹದಲ್ಲಿ ನಕ್ಕುನಗಿಸುವ ಹಾಸ್ಯ ದೊರೆಯದೇ ಇರಬಹುದು. ಆದರೆ, ಚಿಂತನೆಗೆ ಹಚ್ಚುವ ತಿಳಿಹಾಸ್ಯವು ಒಳಗಣ್ಣನ್ನು ತೆರೆಯುವಂತೆ ಮಾಡುತ್ತದೆ’ ಎಂದು ಶ್ಲಾಘಿಸಿದರು. ಭಾಷಾವಿಜ್ಞಾನಿ ಫಾದರ್ ಪ್ರಶಾಂತ ಮಾಡ್ತ, ‘ನನ್ನ ವಿದ್ಯಾರ್ಥಿಯಾಗಿದ್ದ ರಾಜಾರಾಮ್ ಅವರ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
‘ಜಾಗತೀಕರಣದ ಭರಾಟೆಯಲ್ಲಿ ಇಂಗ್ಲಿಷ್ ಭಾಷೆಯ ಬಗ್ಗೆ ಇನ್ನಿಲ್ಲದ ವ್ಯಾಮೋಹ ಬೆಳೆಯುತ್ತಿದೆ. ಇಂಗ್ಲಿಷ್ ಅನ್ನು ಕಲಿಯುವುದು ಅಗತ್ಯ. ಆದರೆ, ಹೆಚ್ಚು ಕಲಿತರೆ ಮಾತೃಭಾಷೆಯ ನೆಲೆಯೊಳಗೆ ಹುಟ್ಟುವ ಸೃಜನಶೀಲತೆ ನಶಿಸಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.
‘ಇಂಗ್ಲಿಷ್ ಜತೆಗೆ ಅದರ ಒಟ್ಟು ಲೋಕದೃಷ್ಟಿಯನ್ನು ಕೂಡ ಕಲಿಯುವುದರಿಂದ ಸ್ಥಳೀಯ ಭಾಷೆ , ಸಂಸ್ಕೃತಿ ಮತ್ತು ಇಂಗ್ಲಿಷ್ ನಡುವೆ ತಿಕ್ಕಾಟಗಳು ಶುರುವಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕಿದೆ’ ಎಂದು ಹೇಳಿದರು.
ವಿಮರ್ಶಕಿ ಡಾ.ಎಂ.ಎಸ್. ಆಶಾದೇವಿ, ‘ಬದುಕಿನ ಎಲ್ಲಾ ಹಂತದಲ್ಲೂ ಹೆಣ್ಣಿಗೆ ಸಮಾನತೆ ದೊರೆಯಬೇಕು ಎಂಬುದು ಸಾಹಿತ್ಯ ಸಂವೇದನೆಯ ಭಾಗವಾಗಬೇಕು’ ಎಂದು ತಿಳಿಸಿದರು. ‘ಉಮಾ ರಾವ್ ಅವರ ಕಾದಂಬರಿಯಲ್ಲಿ ಕಥಾನಾಯಕಿ ಒಳಬಂಡಾಯದಿಂದ ಸ್ವಪ್ರಜ್ಞೆಯೆಡೆಗೆ ಚಲಿಸುತ್ತಾಳೆ. ಭೂತಕಾಲದ ಜಗಳ, ಭವಿಷ್ಯದ ನಿರೀಕ್ಷೆಗಳನ್ನು ಮೀರಿ ವರ್ತಮಾನಕ್ಕಾಗಿ ಹಂಬಲಿಸುತ್ತಾಳೆ. ಈ ಕೃತಿ ಉತ್ತಮ ಸಿನಿಮಾ ಆಗುವ ಲಕ್ಷಣವನ್ನು ಹೊಂದಿದೆ’ ಎಂದು ಹೇಳಿದರು.
ಕೃತಿಗಳ ಬೆಲೆ: ಡಾ.ಬಿ.ಎನ್.ಸುಮಿತ್ರಾಬಾಯಿ ಅವರ ‘ಬೊಗಸೆಯಲ್ಲಿ ಹೊಳೆನೀರು–ವಿಮರ್ಶಾ ಬರಹಗಳು’–₨ 90, ದಿವಂಗತ ಜಿ.ಎಸ್.ಸದಾಶಿವ ಅವರ ‘ಸದಾ ವಾರೆನೋಟ– ಅಂಕಣ ಬರಹ’– ₨140, ಪ್ರೊ. ಆರ್.ರಾಜಾರಾಮ್ ‘ಸ್ಮಾರ್ಟ್ ಇಂಗ್ಲಿಷ್–ಭಾಷಾ ಕಲಿಕೆಯ ಕೈಪಿಡಿ’– ₨160, ಉಮಾ ರಾವ್ ‘ವನಜಮ್ಮನ ಸೀಟು’ ಕಾದಂಬರಿ– ₨50.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.