ADVERTISEMENT

ಸ್ವಾತಂತ್ರ್ಯಾನಂತರ ಹಿಂದೂ ಮುಸ್ಲಿಮರಲ್ಲಿ ಒಡಕು

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST
ಸ್ವಾತಂತ್ರ್ಯಾನಂತರ ಹಿಂದೂ ಮುಸ್ಲಿಮರಲ್ಲಿ ಒಡಕು
ಸ್ವಾತಂತ್ರ್ಯಾನಂತರ ಹಿಂದೂ ಮುಸ್ಲಿಮರಲ್ಲಿ ಒಡಕು   

ಬೆಂಗಳೂರು:  `ಹಿಂದೂಗಳು ಹಾಗೂ ಮುಸ್ಲಿಮರು ಜೊತೆಯಾಗಿ ಶತಮಾನಗಳ ಕಾಲ ನಿರಂತರ ಹೋರಾಟ ನಡೆಸಿ ಸ್ವಾತಂತ್ರ್ಯ ಗಳಿಸಿದೆವು. ಸ್ವಾತಂತ್ರ್ಯ ನಂತರ ನಮ್ಮ ನಡುವೆಯೇ ಕಲಹ ಆರಂಭವಾಗಿದೆ. ಸ್ವಾತಂತ್ರ್ಯಕ್ಕೆ ಚೆಲ್ಲಿದ ರಕ್ತಕ್ಕಿಂತ ಹೆಚ್ಚಿನ ರಕ್ತ ಈಗ ಚೆಲ್ಲುತ್ತಿದ್ದೇವೆ~ ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಕಳವಳ ವ್ಯಕ್ತಪಡಿಸಿದರು.

ಶಾಂತಿ ಪ್ರಕಾಶನದ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಶುಕ್ರವಾರ ಸಂಜೆ ನಡೆದ `ಸಹೀಹುಲ್ ಬುಖಾರಿ~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಬ್ರಿಟಿಷರು ನಮ್ಮನ್ನು 250 ವರ್ಷಗಳ ಕಾಲ ಗುಲಾಮರಂತೆ ನೋಡಿದರು. ಸಂಸ್ಕೃತಿ, ಶ್ರೀಮಂತಿಕೆ ದೋಚಿದರು. ಆದರೆ ಅವರ ಬಗ್ಗೆ ನಮಗೆ ದ್ವೇಷ ಬರಲಿಲ್ಲ. ಅವರು ಹೋದ ಮೇಲೆ ನಮ್ಮ ನಡುವೆಯೇ ದ್ವೇಷ ಆರಂಭವಾಗಿದೆ. ವಿವೇಚನೆ, ವಿವೇಕ ಇಲ್ಲದೆ ಹೊಡೆದಾಡಿಕೊಳ್ಳುತ್ತಿದ್ದೇವೆ. ನಮ್ಮವರು ಯಾರು ಎಂಬುದೇ ನಮಗೆ ಗೊತ್ತಿಲ್ಲ~ ಎಂದು ಅವರು ವಿಷಾದಿಸಿದರು.

ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞ್ಞ ಮಾತನಾಡಿ, `ನಾವು ಆಡಂಬರದ ಜೀವನದ ಮೊರೆ ಹೋಗಿದ್ದೇವೆ. ಭ್ರೂಣಹತ್ಯೆ, ವೃದ್ಧಾಶ್ರಮ ಸಂಸ್ಕೃತಿ ಹೆಚ್ಚುತ್ತಿದೆ. ಮೌಲ್ಯಗಳನ್ನು ಕಳೆದುಕೊಂಡು ಅಶಾಂತಿ, ಅಸಹನೆ ಹೆಚ್ಚಿದೆ. ಆಧುನಿಕ ಕಾಲದಲ್ಲಿ ಮನುಷ್ಯ ನೆಮ್ಮದಿ ಕಳೆದುಕೊಂಡಿದ್ದಾನೆ~ ಎಂದರು.

ಮುಸ್ಲಿಂ ವಿದ್ವಾಂಸ ಮುಫ್ತಿ ಮಹಮ್ಮದ್ ಅಶ್ರಫ್ ಅಲಿ ಬಾಖ್ವಿ ಪುಸ್ತಕ ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಡಾ. ಮರುಳಸಿದ್ದಪ್ಪ, ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಘಟಕದ ಅಧ್ಯಕ್ಷ ಮಹಮ್ಮದ್ ಅಬ್ದುಲ್ಲಾ ಜಾವೆದ್, ಸಾಹಿತಿ ಪ್ರೊ. ಹನ್ನೆರಡುಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.