ADVERTISEMENT

ಹಂಪಿ ಒತ್ತುವರಿ: ಹೈಕೋರ್ಟ್‌ಗೆ ನಕ್ಷೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:25 IST
Last Updated 6 ಮಾರ್ಚ್ 2012, 19:25 IST

ಬೆಂಗಳೂರು: ಹಂಪಿ ಪರಂಪರೆ ತಾಣದ ಒಳಭಾಗದಲ್ಲಿ ಕೆಲವರು ಒತ್ತುವರಿ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದ ಸ್ಥಳ ನಕ್ಷೆಯನ್ನು ಹಂಪಿ ವಿಶ್ವ ಪರಂಪರೆ ತಾಣ ನಿರ್ವಹಣಾ ಪ್ರಾಧಿಕಾರದ ಆಯುಕ್ತರು ಸೋಮವಾರ ಹೈಕೋ  ರ್ಟ್‌ಗೆ ಸಲ್ಲಿಸಿದರು.

ಒತ್ತುವರಿದಾರರಿಗೆ ಪುನರ್ವಸತಿ ಕಲ್ಪಿಸುವ ಪ್ರಾಧಿಕಾರದ ಪ್ರಸ್ತಾವವನ್ನು ಪ್ರಶ್ನಿಸಿ ಭುವನೇಶ್ವರಿ ಎಂಬುವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ನಡೆಯಿತು.

ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠಕ್ಕೆ ಸ್ಥಳ ನಕ್ಷೆ ಸಲ್ಲಿಸಿದ ಪ್ರಾಧಿಕಾರದ ಆಯುಕ್ತರು, ಅದಕ್ಕೆ ಸಂಬಂಧಿಸಿದ ವಿವರ ನೀಡಿದರು. ಬಳಿಕ ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಲಾಯಿತು.

ಫೆಬ್ರುವರಿ 24ರಂದು ಪ್ರಕರಣದ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, ಅರ್ಜಿದಾರರು ಒತ್ತುವರಿ ಮಾಡಿಕೊಂಡಿರುವ ಪ್ರದೇಶಕ್ಕೆ ಸಂಬಂಧಿಸಿದ ಸ್ಥಳ ನಕ್ಷೆಯನ್ನು ಐದು ದಿನಗಳೊಳಗೆ ಸಲ್ಲಿಸುವಂತೆ ಆಯುಕ್ತರಿಗೆ ಆದೇಶಿಸಿತ್ತು.

 ಪುನರ್ವಸತಿ ಸ್ಥಳದ ಬಗ್ಗೆಯೂ ಮಾಹಿತಿ ನೀಡುವಂತೆ ನ್ಯಾಯಪೀಠ ಸೂಚಿಸಿತ್ತು.

ಪುರಾತನ ಸ್ಮಾರಕಗಳು ಮತ್ತು ಪ್ರಾಚ್ಯವಸ್ತು ಸಂರಕ್ಷಣಾ ಕಾಯ್ದೆ 1958ರ ಅಡಿಯಲ್ಲಿ ಕೇಂದ್ರ ಸರ್ಕಾರ 2003ರ ಸೆಪ್ಟೆಂಬರ್ 15ರಂದು ಅಧಿಸೂಚನೆ ಪ್ರಕಟಿಸಿದೆ.

ಈ ಅಧಿಸೂಚನೆ ಪ್ರಕಾರ ಹಂಪಿ ಸ್ಮಾರಕವು ಸರ್ವೆ ನಂಬರ್ 109, 130, 135, 136, 149 ಮತ್ತು 153ರ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಆಯುಕ್ತರು ವಿವರಿಸಿದರು.

ತಮ್ಮನ್ನು ಕಾನೂನುಬಾಹಿರವಾಗಿ ಒಕ್ಕಲೆಬ್ಬಿಸಲಾಗುತ್ತಿದೆ ಎಂಬ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ. ಅವರು ನಿಷೇಧಿತ ವಲಯದಲ್ಲಿ ಇದ್ದಾರೆ. ಒತ್ತುವರಿದಾರರಿಗೆ ಪುರ್ನವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.