ADVERTISEMENT

ಹಕ್ಕು ಪಡೆಯಲು ಬುಡಕಟ್ಟು ಜನರಿಗೆ ಶಿಕ್ಷಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2012, 19:30 IST
Last Updated 28 ಫೆಬ್ರುವರಿ 2012, 19:30 IST
ಹಕ್ಕು ಪಡೆಯಲು ಬುಡಕಟ್ಟು ಜನರಿಗೆ ಶಿಕ್ಷಣ ಅಗತ್ಯ
ಹಕ್ಕು ಪಡೆಯಲು ಬುಡಕಟ್ಟು ಜನರಿಗೆ ಶಿಕ್ಷಣ ಅಗತ್ಯ   

ಬೆಂಗಳೂರು: `ಸ್ವಾತಂತ್ರ್ಯ ಬಂದು 65 ವರ್ಷಗಳು ಕಳೆದರೂ ಇನ್ನೂ ದೇಶದ ಬುಡಕಟ್ಟು ಜನರು ಶಿಲಾಯುಗದ ಜೀವನ ವಿಧಾನದಲ್ಲಿಯೇ ಬದುಕುತ್ತಿರುವುದು ಶೋಚನೀಯ~ ಎಂದು ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಎಂ.ಪೆರುಮಾಳ್ ವಿಷಾದಿಸಿದರು.

ನಗರದಲ್ಲಿ ಮಂಗಳವಾರ ನೆಹರು ಯುವ ಕೇಂದ್ರ ಆಯೋಜಿಸಿದ್ದ ನಾಲ್ಕನೇ ಬುಡಕಟ್ಟು ಯುವ ಜನ ಸಂಸ್ಕೃತಿ ವಿನಿಮಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, `ನಾಗರಿಕತೆಯ ಉಗಮ ಕಾಲದಿಂದಲೂ ಬುಡಕಟ್ಟು ಜನರು ಕಾಡಿನ ನಡುವೆ ಕಷ್ಟಕರ ಜೀವನವನ್ನು ನಡೆಸಿಕೊಂಡೇ ಬಂದವರು. ಆದರೆ ಇಂದಿನ ಆಧುನಿಕ ಕಾಲದಲ್ಲಿಯೂ ಬುಡಕಟ್ಟು ಜನರು ಹಿಂದುಳಿದಿರುವುದು ದೇಶದ ದುರಂತ. ಬುಡಕಟ್ಟು ಜನಾಂಗ ಮುನ್ನೆಲೆಗೆ ಬರಲು ಬುಡಕಟ್ಟು ಯುವ ಜನತೆ ಶಿಕ್ಷಣ ಪಡೆದು ಉನ್ನತ ಸ್ಥಾನಗಳನ್ನು ಪಡೆಯಲು ಪ್ರಯತ್ನಿಸಬೇಕು~ ಎಂದು ಅವರು ಕರೆ ನೀಡಿದರು.

`ದೇಶದ ಒಟ್ಟೂ ಜನಸಂಖ್ಯೆಯಲ್ಲಿ ಶೇಕಡ ನಾಲ್ಕು ಕೋಟಿ ಬುಡಕಟ್ಟು ಯುವ ಜನರಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಬುಡಕಟ್ಟು ಜನರಲ್ಲಿ ಶಿಕ್ಷಣ ಪಡೆದಿರುವವರು ಬೆರಳೆಣಿಕೆಯಷ್ಟು ಜನರು ಮಾತ್ರ. ನಕ್ಸಲರು ಬುಡಕಟ್ಟು ಯುವ ಜನರನ್ನು ಗುರಿಯಾಗಿಟ್ಟುಕೊಂಡು ರೂಪಿಸುವ ಕಾರ್ಯತಂತ್ರಗಳಿಗೆ ಬುಡಕಟ್ಟು ಯುವಕರು ಪ್ರತಿರೋಧ ಒಡ್ಡುವ ಮೂಲಕ ಅಪರಾಧ ಚಟುವಟಿಕೆಗಳಿಂದ ದೂರಾಗಬೇಕು~ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇ.ವೆಂಕಟಯ್ಯ ಮಾತನಾಡಿ, `ಬುಡಕಟ್ಟು ಜನರು ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಶೇಕಡಾ 8.2 ರಷ್ಟಿರುವ ಬುಡಕಟ್ಟು ಯುವ ಜನರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಸಲುವಾಗಿ ಶಿಕ್ಷಣವನ್ನು ಪಡೆಯಲೇಬೇಕಾದ ಅನಿವಾರ್ಯವಿದೆ. ಬುಡಕಟ್ಟು ಯುವ ಜನರು ಕೇವಲ ಉದ್ಯೋಗಕ್ಕಾಗಿ ಶಿಕ್ಷಣ ಎಂಬ ಪೂರ್ವಗ್ರಹವನ್ನು ಮರೆತು ಜ್ಞಾನವೃದ್ಧಿಗಾಗಿ ಶಿಕ್ಷಣ ಪಡೆಯಬೇಕು~ ಎಂದು ಅವರು ನುಡಿದರು.

ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಮಧ್ಯ ಪ್ರದೇಶಗಳೂ ಸೇರಿದಂತೆ ಒಟ್ಟು ಏಳು ರಾಜ್ಯಗಳ ಸುಮಾರು 500 ಜನ ಬುಡಕಟ್ಟು ಯುವಕ ಮತ್ತು ಯುವತಿಯರು ಒಂದು ವಾರದ ಸಂಸ್ಕೃತಿ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ತಮ್ಮ ಬುಡಕಟ್ಟು ಕಲೆಗಳನ್ನು ವಿನಿಯಮ ಮಾಡಿಕೊಳ್ಳಲಿದ್ದಾರೆ. ನೆಹರು ಯುವ ಕೇಂದ್ರದ ವಲಯ ನಿರ್ದೇಶಕ ಆರ್.ನಟರಾಜನ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಜಿ.ಎಸ್.ಶಿವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.