ADVERTISEMENT

ಹಣದ ಸದ್ಬಳಕೆ- ಆತ್ಮಾವಲೋಕನ ಅಗತ್ಯ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:35 IST
Last Updated 28 ಫೆಬ್ರುವರಿ 2011, 19:35 IST

ಬೆಂಗಳೂರು: ‘ಮಹಿಳೆಯ ಸಬಲೀಕರಣ ಮತ್ತು ಮಕ್ಕಳ ಅಭಿವೃದ್ದಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಧಾರಾಳವಾಗಿ ಹಣ ಬಿಡುಗಡೆ ಮಾಡುತ್ತಿವೆ. ಆದರೆ ಬಿಡುಗಡೆಯಾದ ಹಣ ಸದ್ಬಳಕೆಯಾಗುತ್ತಿದೆಯೇ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ರಾಜ್ಯ ಸಮಾಜ ಕಲ್ಯಾಣ ಮಂಡಳಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೌಟುಂಬಿಕ ಸಲಹಾ ಕೇಂದ್ರದ ಕಾರ್ಯಕರ್ತರ ಮತ್ತು ಸಲಹೆಗಾರರ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಯಂ ಸೇವಾ ಸಂಘಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಾಮಾಜಿಕ ಸಮಸ್ಯೆಗಳನ್ನು ಗುರುತಿಸಿ ಮಂಡಳಿಗೆ ಯೋಜನಾ ವರದಿಗಳನ್ನು ಸಲ್ಲಿಸುವ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಿದೆ’ ಎಂದು ಹೇಳಿದರು. ‘ಬದಲಾಗುತ್ತಿರುವ ಸಮಾಜದಲ್ಲಿ ಆಧುನಿಕ ಸಮಸ್ಯೆಗಳಿಗೆ ಕೌಟುಂಬಿಕ ಸಲಹಾ ಕೇಂದ್ರದ ಕಾರ್ಯಕರ್ತರು ಸ್ಪಂದಿಸಬೇಕಿದ್ದು, ಹೊಸ ವಿಚಾರಗಳ ಕಲಿಕಾ ತರಬೇತಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಭಾಗದಲ್ಲಿ ದುಡಿಯುವವರ ಸಂಖ್ಯೆಗೆ ಅನುಗುಣವಾಗಿ ಶಿಶು ಪಾಲಕರ ಕೇಂದ್ರಗಳನ್ನು ತೆರೆಯಬೇಕಿದೆ’ ಎಂದರು.

ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ವಿನೋದಾ ನಟರಾಜ್ ಮಾತನಾಡಿ, ‘ಮಂಡಳಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಹೈನುಗಾರಿಕೆ ಮತ್ತು ಕಿಶೋರಿ ಮೇಳ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಹಾಗೆಯೇ ಅಸ್ತಿತ್ವದಲ್ಲಿರುವ ಎಲ್ಲಾ ಮಂಡಳಿಯ ಶಿಶುಪಾಲ ಕೇಂದ್ರಗಳಿಗೆ ಹೆಚ್ಚಿನ ಪ್ರಮಾಣದ ಆಹಾರ ಒದಗಿಸಬೇಕು’ ಎಂದು ಮನವಿ ಮಾಡಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಂಗಳಾ ಶ್ರೀಧರ್, ಬಾಲಭವನದ ಅಧ್ಯಕ್ಷೆ ಸುಲೋಚನ ಭಟ್ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.