ADVERTISEMENT

ಹನುಮ ಮೂರ್ತಿ ರವಾನೆ; ಆಯೋಜಕರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:31 IST
Last Updated 9 ಏಪ್ರಿಲ್ 2018, 19:31 IST
ಹನುಮ ಮೂರ್ತಿ ರವಾನೆ; ಆಯೋಜಕರ ವಿರುದ್ಧ ಎಫ್‌ಐಆರ್‌
ಹನುಮ ಮೂರ್ತಿ ರವಾನೆ; ಆಯೋಜಕರ ವಿರುದ್ಧ ಎಫ್‌ಐಆರ್‌   

ಬೆಂಗಳೂರು: ಕೋಲಾರ ಜಿಲ್ಲೆಯ ನರಸಾಪುರ ಹೋಬಳಿಯ ಭೈರಸಂದ್ರದಿಂದ 62 ಅಡಿ ಏಕಶಿಲಾ ಹನುಮ ಮೂರ್ತಿ ಹೊತ್ತು ತರುತ್ತಿದ್ದ ವಾಹನವು ಕಾಚರಕನಹಳ್ಳಿಗೆ ಬಂದು ಸೇರಿದೆ. ಆದರೆ, ಅದರ ರವಾನೆಗಾಗಿ ಮೋರಿಯನ್ನು ಮುಚ್ಚಿದ್ದ ಹಾಗೂ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಆಯೋಜಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಸೋಮವಾರ ಬೆಳಿಗ್ಗೆ ಎಚ್‌ಬಿಆರ್‌ ಬಡಾವಣೆ ಪ್ರವೇಶಿಸಿದ್ದ ಮೂರ್ತಿಯನ್ನು ಕೋದಂಡರಾಮಸ್ವಾಮಿ ದೇವಾಲಯದ ಮೈದಾನದತ್ತ ತರಲಾಗುತ್ತಿತ್ತು. ಇದಕ್ಕಾಗಿ ರಸ್ತೆಯಲ್ಲಿದ್ದ ವಿಭಜಕಗಳನ್ನು ಒಡೆದು ಹಾಕಲಾಯಿತು. ಜತೆಗೆ ರಸ್ತೆ ಪಕ್ಕದಲ್ಲಿದ್ದ ಮೋರಿಯನ್ನು ಮುಚ್ಚಲಾಯಿತು. ಇದಕ್ಕೆ ಯಾವುದೇ ಅನುಮತಿಯನ್ನೂ ಆಯೋಜಕರು ಪಡೆದಿರಲಿಲ್ಲ.

ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಜಗದೀಶ್‌, ಆಯೋಜಕರ ವರ್ತನೆ ಯನ್ನು ಪ್ರಶ್ನಿಸಿದರು. ‘ಮೂರ್ತಿ ರವಾನೆ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕಿತ್ತು. ಏಕಾಏಕಿ ಸಾರ್ವಜನಿಕರ ಆಸ್ತಿಗೆ ಧಕ್ಕೆ ಮಾಡುವುದು ಅಪರಾಧ’ ಎಂದು ತಿಳಿ ಹೇಳಿದರು.

ADVERTISEMENT

ಅಷ್ಟಕ್ಕೆ ಆಯೋಜಕರು, ಜಗದೀಶ್‌ ವಿರುದ್ಧ ವಾಗ್ವಾದಕ್ಕಿಳಿದರು. ಅದೇ ವೇಳೆ ಪ್ರತಿಭಟನೆ ನಡೆಸಿದ ಸ್ಥಳೀಯರು, ‘ಸಚಿವ ಕೆ.ಜೆ.ಜಾರ್ಜ್‌ ಅವರ ಒತ್ತಡಕ್ಕೆ ಮಣಿದು, ಅಧಿಕಾರಿಗಳು ಮೂರ್ತಿ ರವಾನೆ ಯನ್ನು ತಡೆಯುತ್ತಿದ್ದಾರೆ’ ಎಂದು ದೂರಿದರು.

ಇದರಿಂದಾಗಿ ಸ್ಥಳದಲ್ಲಿ ಕೆಲ ಗಂಟೆ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಬಂದ ಪೊಲೀಸರು, ಪರಿಸ್ಥಿತಿ ತಿಳಿಗೊಳಿಸಿದರು. ನಂತರವೇ ಮೂರ್ತಿಯನ್ನು ನಿಗದಿತ ಸ್ಥಳಕ್ಕೆ ತೆಗೆದುಕೊಂಡು ಹೋಗಲಾಯಿತು.

‘ಮೂರ್ತಿ ಹೊತ್ತ ಲಾರಿಯು 26 ಅಡಿ ಅಗಲವಿದೆ. 750 ಟನ್‌ ಭಾರವಿದೆ. ಇದನ್ನು ರಸ್ತೆಯಲ್ಲಿ ಸಾಗಿಸುವಾಗ ಸರ್ಕಾರಿ ಜಾಗದಲ್ಲಿ ಅತಿಕ್ರಮವಾಗಿ ಪ್ರವೇಶಿಸಲಾಗಿದೆ. ಅದನ್ನು ಕೇಳಿದ್ದ ಸರ್ಕಾರಿ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಈ ಸಂಬಂಧ ಉಪವಿಭಾಗಾಧಿಕಾರಿ ಜಗದೀಶ್‌ ಅವರೇ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಆಯೋಜಕರಾದ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಜಗದೀಶ್ ರೆಡ್ಡಿ, ಎಂ.ಎನ್‌.ರೆಡ್ಡಿ ಹಾಗೂ ಗೋಪಾಲ ರೆಡ್ಡಿ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ’ ಎಂದರು.

ಕೋಲಾರ ಜಿಲ್ಲೆಯ ನರಸಾಪುರ ಹೋಬಳಿಯ ಭೈರಸಂದ್ರ ಗ್ರಾಮದಿಂದ ಈ ಮೂರ್ತಿಯನ್ನು ನಗರಕ್ಕೆ ತರಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆಯಿಂದಾಗಿ  ಮೂರ್ತಿಯನ್ನು ಕೆಲ ದಿನಗಳ ಹಿಂದಷ್ಟೇ ಹೊಸಕೋಟೆಯ ದಂಡುಪಾಳ್ಯದ ಬಳಿ ಪೊಲೀಸರು ತಡೆದು ನಿಲ್ಲಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರಿಂದ ಮೂರ್ತಿಯನ್ನು ಮುಂದಕ್ಕೆ ಕೊಂಡೊಯ್ಯಲು ಅನುಮತಿ ನೀಡಿದ್ದರು. ನಂತರ, ಮೂರ್ತಿ ಹೊತ್ತಿದ್ದ ವಾಹನವು ಹೆಣ್ಣೂರು–ಬಾಗಲೂರು ರಸ್ತೆಯ ರೈಲ್ವೆ ಸೇತುವೆ ದಾಟಿ ಹೋಗಲಾರದೆ ರಸ್ತೆಯಲ್ಲಿ ನಿಂತುಕೊಂಡಿತ್ತು. ರ‍್ಯಾಂಪ್‌ ನಿರ್ಮಿಸುವ ಮೂಲಕ ವಾಹನಗಳನ್ನು ಸೇತುವೆ ದಾಟಿಸಲಾಗಿತ್ತು. 

‘ಶ್ರೀರಾಮ ಚೈತನ್ಯ ವರ್ಧಿನಿ ಟ್ರಸ್ಟ್‌’ ವತಿಯಿಂದ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.