ADVERTISEMENT

ಹಲವೆಡೆ ಕಲ್ಲು ತೂರಾಟ, ಬಸ್‌ಗಳಿಗೆ ಹಾನಿ, ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 31 ಮೇ 2012, 18:45 IST
Last Updated 31 ಮೇ 2012, 18:45 IST

ಬೆಂಗಳೂರು: ಪೆಟ್ರೋಲ್ ದರ ಏರಿಕೆಯನ್ನು ಖಂಡಿಸಿ ಎನ್‌ಡಿಎ ಹಾಗೂ ಎಡಪಕ್ಷಗಳು ಗುರುವಾರ ಕರೆ ನೀಡಿದ್ದ `ಭಾರತ್ ಬಂದ್~ ಸಂದರ್ಭದಲ್ಲಿ ಕೆ.ಆರ್. ಪುರ, ಐಟಿಐ ಕಾಲೊನಿ ಹಾಗೂ ಮಡಿವಾಳದಲ್ಲಿ ಬಿಎಂಟಿಸಿಗೆ ಸೇರಿದ ಮೂರು ಬಸ್‌ಗಳನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ. ನಗರದ ಹೊರವಲಯದಲ್ಲಿ 14 ಬಸ್‌ಗಳಿಗೆ ಕಲ್ಲೆಸೆದು ಹಾನಿ ಮಾಡಲಾಗಿದೆ. ಉಳಿದಂತೆ ಯಾವುದೇ ಅಹಿತಕರ ಘಟನೆಯಾದ ಬಗ್ಗೆ ವರದಿಯಾಗಿಲ್ಲ.

`ಬಂದ್ ಕಾರಣಕ್ಕೆ ನಗರದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸುವುದಿಲ್ಲ. ನಗರದ ಯಾವುದಾದರೂ ಭಾಗದಲ್ಲಿ ಅಹಿತಕರ ಘಟನೆ ಸಂಭವಿಸಿದರೆ ಆ ಭಾಗದಲ್ಲಿ ಮಾತ್ರ ಬಸ್ ಸಂಚಾರ ಸ್ಥಗಿತಗೊಳಿಸಲಾಗುವುದು~ ಎಂದು ಬಿಎಂಟಿಸಿ ಅಧಿಕಾರಿಗಳು ಬುಧವಾರ ಭರವಸೆ ನೀಡಿದ್ದರು. ಆದರೆ, ಮುಂಜಾನೆಯೇ ದುಷ್ಕರ್ಮಿಗಳು ಮೂರು ಬಸ್‌ಗಳಿಗೆ ಬೆಂಕಿ ಹಚ್ಚಿದ್ದರು. `ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಬಸ್ ನಿಲ್ದಾಣಕ್ಕೆ ಬಂದ ಬಸ್‌ಗಳನ್ನು ಬೆಳಿಗ್ಗೆ ವಾಪಸ್ ಡಿಪೊಗಳಿಗೆ ಕಳುಹಿಸಲಾಯಿತು. ಬೆಳಿಗ್ಗೆಯ ಕಹಿ ಘಟನೆಗಳು ಸಂಭವಿಸಿದ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಬಸ್ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಯಿತು~ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

`ಕೆ.ಆರ್.ಪುರದ ಬಿಎಸ್ಸೆನ್ನೆಲ್ ನಿಲ್ದಾಣದ ಸಮೀಪದ ನಿಲ್ಲಿಸಿದ್ದ ಬಸ್ (ಕೆಎ 01 ಎಫ್‌ಎ 831) ಗೆ ಮುಂಜಾನೆ 3.45ಕ್ಕೆ ಬೆಂಕಿ ಹಚ್ಚಲಾಗಿದೆ. ಈ ಸಂದರ್ಭ ಚಾಲಕ ಶ್ರೀನಿವಾಸಪ್ಪ ಹಾಗೂ ನಿರ್ವಾಹಕ ಭೀಮಪ್ಪ ದೋಣಿ ಬಸ್‌ನಲ್ಲಿ ನಿದ್ರಿಸುತ್ತಿದ್ದರು. ಬೆಂಕಿಯ ಜ್ವಾಲೆ ಹರಡಲಾರಂಭಿಸುತ್ತಿದ್ದಂತೆ ಎಚ್ಚೆತ್ತ ಅವರು ಬಸ್‌ನಿಂದ ಜಿಗಿದು ಪಾರಾದರು~ ಎಂದು ಡಿಪೊ ಸಿಬ್ಬಂದಿ ಮಾಹಿತಿ ನೀಡಿದರು. `ಅಲ್ಲೇ ಸಮೀಪದ ಐಟಿಐ ಕಾಲೊನಿ ಸಮೀಪ ನಿಲ್ಲಿಸಿದ್ದ ಬಸ್ (ಕೆಎ01 ಎಫ್‌ಎ 165)ಗೂ ಮುಂಜಾನೆ 3.30ಕ್ಕೆ ಬೆಂಕಿ ಹಚ್ಚಲಾಗಿದ್ದು, ಚಾಲಕ ಶ್ರೀನಿವಾಸ್ ಹಾಗೂ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಕೆ.ಆರ್.ಪುರ ಠಾಣೆಗೆ ಬಿಎಂಟಿಸಿ ಅಧಿಕಾರಿಗಳು ದೂರು ಸಲ್ಲಿಸಿದ್ದಾರೆ. ದುಷ್ಕರ್ಮಿಗಳ ಸುಳಿವು ಪತ್ತೆಯಾಗಿಲ್ಲ. ಈ ಎರಡೂ ಬಸ್‌ಗಳ ದುರಸ್ತಿಗೆ ತಲಾ ರೂ 15 ಲಕ್ಷ ಬೇಕಾಗಬಹುದು~ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಮಡಿವಾಳದಲ್ಲೂ ಬಸ್‌ಗೆ ಬೆಂಕಿ ಹಚ್ಚಿದ್ದಾರೆ.

`ನಗರದಲ್ಲಿ ಬಸ್ ಸಂಚಾರ ಇದ್ದರೆ ಬಂದ್ ಯಶಸ್ವಿಯಾಗುವುದಿಲ್ಲ. ಬಸ್ ಸಂಚಾರ ಸ್ಥಗಿತಗೊಳಿಸಬೇಕು ಎಂಬ ಏಕೈಕ ಉದ್ದೇಶದಿಂದ ದುಷ್ಕರ್ಮಿಗಳು ಬಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಸಾರ್ವಜನಿಕ ಸ್ವತ್ತಿಗೆ ಹಾನಿಯಾದಾಗ ಅನಿವಾರ್ಯವಾಗಿ ಬಸ್ ಸಂಚಾರ ಸ್ಥಗಿತದ ನಿರ್ಧಾರ ಕೈಗೊಳ್ಳಲೇಬೇಕಾಗುತ್ತದೆ~ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಮಾರುಕಟ್ಟೆಗಳು ಖಾಲಿ: ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ ನಗರದ ಮಾರುಕಟ್ಟೆಗಳಲ್ಲಿ ಗ್ರಾಹಕರ ಸಂಖ್ಯೆ ಬೆರಳೆಣಿಕೆಯಲ್ಲಿತ್ತು. ವ್ಯಾಪಾರ ವಹಿವಾಟಿನಲ್ಲಿ ಗಣನೀಯ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಸಂಜೆ ವೇಳೆಗೆ ಹತಾಶೆಯಿಂದ ಮರಳಿದರು. ಯಶವಂತಪುರದ ಎಪಿಎಂಸಿ ಪ್ರಾಂಗಣದಲ್ಲೂ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಲಾರಿಗಳು ಎಪಿಎಂಸಿ ಪ್ರಾಂಗಣದಲ್ಲೇ ಮೊಕ್ಕಾಂ ಹೂಡಿದ್ದವು.

ವಾಹನ ಸಂಚಾರ ಮಿತ: ಸಂಚಾರ ದಟ್ಟಣೆಯಿಂದ ವಾಹನ ಚಾಲಕರು ಗಂಟೆಗಟ್ಟಲೆ ಪರದಾಡುತ್ತಿದ್ದ ರಸ್ತೆಗಳಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು. ಟ್ರಾಫಿಕ್ ಜಾಮ್‌ನ ಕಿರಿ ಕಿರಿ ಇಲ್ಲದೆ ಚಾಲಕರು ನಿರಾಳಭಾವ ಅನುಭವಿಸಿದರು. 

`ಬಂದ್‌ಗೆ ಕರೆ ನೀಡುವುದೇ ತಪ್ಪು. ಬಂದ್‌ನಿಂದ ಜನರಿಗೇನೂ ಲಾಭ ಇಲ್ಲ. ಇದು ಪಕ್ಷಗಳ ರಾಜಕೀಯ ಸ್ಟಂಟ್ ಮಾತ್ರ. ಬಂದ್‌ನ ಏಕೈಕ ಲಾಭವೆಂದರೆ ನಗರದಲ್ಲಿ ಒಂದು ದಿನದ ಮಟ್ಟಿಗೆ ವಾಹನ ದಟ್ಟಣೆ ಕಡಿಮೆಯಾಗುವುದು. ಯಾವುದೇ ರಗಳೆ, ಜಗಳ ಇಲ್ಲದೆ ಒಂದು ದಿನ ವಾಹನ ಚಾಲನೆ ಮಾಡಬಹುದು. ಈ ದೃಷ್ಟಿಯಿಂದ ಬಂದ್ ಅಪೂರ್ವ ಅನುಭವ ನೀಡುತ್ತದೆ~ ಎಂದು ಬೈಕ್ ಸವಾರ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಇನ್ನೊಂದೆಡೆ ಬಂದ್ ನೆಪದಲ್ಲಿ ಇಟ್ಟ ಬಂದ ಹಾದಿಯಲ್ಲಿ ಸಾಗಿ ವಾಹನ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದರು. ಸಿಗ್ನಲ್‌ಗಳಲ್ಲಿ ಸಂಚಾರ ಪೊಲೀಸರ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ವಾಹನ ಚಾಲಕರು ದಂಡ ತೆರುವುದರಿಂದ ಪಾರಾದರು.

ಟ್ಯಾಕ್ಸಿಗಳಿಗೆ ಬೇಡಿಕೆ: ಬಸ್ ಇಲ್ಲದ ಬಿಸಿ ವಿಮಾನ ಪ್ರಯಾಣಿಕರಿಗೂ ತಟ್ಟಿತು. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ ಇಲ್ಲದೆ ಸಂಕಷ್ಟ ಅನುಭವಿಸಬೇಕಾಯಿತು. ಟ್ಯಾಕ್ಸಿಗಳಿಗಂತೂ ಎಲ್ಲಿಲ್ಲದ ಬೇಡಿಕೆ. ಟ್ಯಾಕ್ಸಿಗಳಿಗೂ ಕಟ್ಟುನಿಟ್ಟಿನ ಬಾಡಿಗೆ ದರ ನಿಗದಿಪಡಿಸಿದ್ದರಿಂದ ಇಲ್ಲಿ ಸುಲಿಗೆಗೆ ಅವಕಾಶ ಇರಲಿಲ್ಲ.

ಆದರೆ ಬಸ್‌ಗಿಂತ ಹೆಚ್ಚಿನ ಹಣ ತೆತ್ತು ಪ್ರಯಾಣಿಕರು ಪ್ರಯಾಣ ಬೆಳೆಸಬೇಕಾಯಿತು. ಬಂದ್‌ಗೆ ಬೆಂಬಲ ಸೂಚಿಸಿ ವಿಮಾನ ನಿಲ್ದಾಣದ ಟ್ಯಾಕ್ಸಿಗಳು ಸಹ ಸಂಚಾರ ಸ್ಥಗಿತಗೊಳಿಸಿವೆ ಎಂದು ಬೆಳಿಗ್ಗೆ ವದಂತಿ ಹಬ್ಬಿತ್ತು. `ಟ್ಯಾಕ್ಸಿ ಸಂಚಾರ ಸ್ಥಗಿತಗೊಳಿಸಿಲ್ಲ. ವ್ಯವಸ್ಥೆ ಎಂದಿನಂತೆಯೇ ಮುಂದುವರಿದಿದೆ~ ಎಂದು ಟ್ಯಾಕ್ಸಿ ಚಾಲಕರು ಸ್ಪಷ್ಟಪಡಿಸಿದರು.

ಬೀದಿಬದಿಯಲ್ಲೇ ವ್ಯಾಪಾರ:  ಬೀದಿಬದಿ ವ್ಯಾಪಾರಿಗಳ ಚಟುವಟಿಕೆ ಎಂದಿನಂತೆ ಸಾಗಿತ್ತು. ಆದರೆ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. `ಬೆಳಿಗ್ಗೆಯಿಂದ ವ್ಯಾಪಾರವೇ ಆಗಿಲ್ಲ. ಬಸ್ ಇದ್ದಿದ್ದರೆ ಜನರು ಬರುತ್ತಿದ್ದರು.

ಬುಧವಾರವೇ ಮಾಹಿತಿ ನೀಡಿದ್ದರೆ ನಾವು ರಜೆ ಹಾಕುತ್ತಿದ್ದೆವು. ಈ ದಿನ ಬರಿಗೈಯಲ್ಲೇ ವಾಪಸ್ ಹೋಗಬೇಕಾಗುತ್ತದೆ~ ಎಂದು ಬಸವನಗುಡಿಯ ತರಕಾರಿ ವ್ಯಾಪಾರಿ ಲಕ್ಷ್ಮೀದೇವಿ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.