ADVERTISEMENT

ಹಲ್ಲಿ ಎಸೆದು ಯುವತಿ ಮೈ ಮುಟ್ಟಿದ್ದ ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 19:59 IST
Last Updated 18 ಜೂನ್ 2017, 19:59 IST
ಮುರಳಿ
ಮುರಳಿ   

ಬೆಂಗಳೂರು: ಯುವತಿಯ ಮೈ ಮೇಲೆ ಪ್ಲಾಸ್ಟಿಕ್ ಹಲ್ಲಿ ಎಸೆದು ಅದನ್ನು ತೆಗೆಯುವ ನೆಪದಲ್ಲಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಮುರಳಿ (35) ಎಂಬಾತ ಇಂದಿರಾನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಎಚ್‌.ಎ.ಎಲ್‌. ಸಮೀಪದ ಲಾಲ್‌ ಬಹದ್ದೂರ್‌ ಶಾಸ್ತ್ರಿನಗರ ನಿವಾಸಿಯಾದ ಮುರಳಿ, ತರಕಾರಿ ಮಂಡಿಯಲ್ಲಿ ಕೆಲಸ ಮಾಡುತ್ತಾನೆ. ಈತನ ವಿರುದ್ಧ 24 ವರ್ಷದ ಯುವತಿಯೊಬ್ಬರು ದೂರು ಕೊಟ್ಟಿದ್ದರು.

ಬಿಹಾರದ ಯುವತಿ, ಸಿಎಂಎಚ್ ರಸ್ತೆಯ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡು ಹೆಸರಘಟ್ಟದಲ್ಲಿ ನೆಲೆಸಿದ್ದಾರೆ. ಶುಕ್ರವಾರ ಬೆಳಿಗ್ಗೆ 9.30ರ ಸುಮಾರಿಗೆ ಕೆಲಸಕ್ಕೆ ಹೊರಟಿದ್ದ ಅವರು, 4ನೇ ಮಹಡಿಯಲ್ಲಿರುವ ಕಚೇರಿಗೆ ಲಿಫ್ಟ್‌ನಲ್ಲಿ ಹೋಗುತ್ತಿದ್ದರು.

ADVERTISEMENT

ಆಗ ಲಿಫ್ಟ್‌ನಲ್ಲೇ ಇದ್ದ ಮುರಳಿ, ಮೈ ಮೇಲೆ ಪ್ಲಾಸ್ಟಿಕ್ ಹಲ್ಲಿ ಎಸೆದಿದ್ದ. ಅವರು ಚೀರಿಕೊಳ್ಳುತ್ತಿದ್ದಂತೆಯೇ ಅದನ್ನು ತೆಗೆಯುವ ನೆಪದಲ್ಲಿ ಮೈ ಮುಟ್ಟಿದ್ದ. ಅದು ಪ್ಲಾಸ್ಟಿಕ್ ಹಲ್ಲಿ ಎಂಬುದನ್ನು ಅರಿತ ಯುವತಿ, ಆತನ ವಿರುದ್ಧ ರೇಗಾಡಿದ್ದರು. ಲಿಫ್ಟ್ ಬಾಗಿಲು ತೆರೆದುಕೊಳ್ಳುತ್ತಿದ್ದಂತೆಯೇ ಆರೋಪಿ ಓಡಿ ಹೋಗಿದ್ದ.

‘ಸಿ.ಸಿ. ಟಿ.ವಿ ಕ್ಯಾಮೆರಾದಲ್ಲಿ ಆತನ ಚಹರೆ ಸಿಕ್ಕಿತು. ಅದನ್ನು ಎಲ್ಲ ಠಾಣೆಗಳಿಗೂ ರವಾನಿಸಿದ್ದೆವು. ಶನಿವಾರ ಸಂಜೆ ಸಂಬಂಧಿ ಯುವತಿಯ ಜತೆ ಆತ ಸಿಎಂಎಚ್‌ ರಸ್ತೆಗೆ ಬಂದಿದ್ದ. ಅಲ್ಲಿ ನಿಂತಿದ್ದ ಪೊಲೀಸ್ ಹೊಯ್ಸಳ ವಾಹನ ನೋಡುತ್ತಿದ್ದಂತೆಯೇ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಲು ಆರಂಭಿಸಿದ. ಸಿಬ್ಬಂದಿ ಹತ್ತಿರ ಹೋಗುತ್ತಿದ್ದಂತೆಯೇ ಜತೆಗಿದ್ದ ಯುವತಿಯನ್ನು ಬಿಟ್ಟು ಓಡಲಾರಂಭಿಸಿದ. ಆಗ ಸಿಬ್ಬಂದಿ ಹಿಡಿದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪತ್ನಿ–ಇಬ್ಬರು ಮಕ್ಕಳ ಜತೆ ನೆಲೆಸಿರುವ ಮುರಳಿ, ಈ ಹಿಂದೆ ಎಚ್‌.ಎ.ಎಲ್‌ ಠಾಣೆ ವ್ಯಾಪ್ತಿಯಲ್ಲೂ ಇದೇ ರೀತಿಯ ಕೃತ್ಯ ಎಸಗಿದ್ದ. ಆಗ ಸ್ಥಳೀಯರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಆದರೆ, ಪೊಲೀಸರ ವಶಕ್ಕೆ ಒಪ್ಪಿಸಿರಲಿಲ್ಲ ಎಂದು ತಿಳಿದು ಬಂದಿದೆ.

ಜೇನುಹುಳ ಇತ್ತು: ಆರಂಭದಲ್ಲಿ ಮುರಳಿ, ‘ಯುವತಿಯ ಭುಜದ ಮೇಲೆ ಜೇನುಹುಳ ಕುಳಿತಿತ್ತು. ಅದನ್ನು ಓಡಿಸಲು ಭುಜ ಮುಟ್ಟಿದ್ದೆ’ ಎಂದು ಹೇಳಿಕೆ ಕೊಟ್ಟಿದ್ದ. ಸಂತ್ರಸ್ತೆಯನ್ನು ಠಾಣೆಗೆ ಕರೆಸಿದ ನಂತರ, ಹಲ್ಲಿ ಎಸೆದು ಮೈ ಮುಟ್ಟಿದ್ದಾಗಿ ತಪ್ಪೊಪ್ಪಿಕೊಂಡ ಎಂದು ತನಿಖಾಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.