ಬೆಂಗಳೂರು: ನಗರ ರೈಲು ನಿಲ್ದಾಣದ ಆರನೇ ಪ್ಲಾಟ್ಫಾರಂನಲ್ಲಿ ಭಾನುವಾರ ನಸುಕಿನ ವೇಳೆ ಎರಡು ರೈಲುಗಳ ಎಂಜಿನ್ಗಳು ಹಳಿ ತಪ್ಪಿದ್ದರಿಂದ ಇತರೆ ರೈಲುಗಳ ಓಡಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಯಿತು.
ಬೆಳಿಗ್ಗೆ 4 ಗಂಟೆ ಸುಮಾರಿಗೆ ಲೋಕೊ ಪೈಲಟ್ಗಳು, ಬೋಗಿಗಳನ್ನು ಬದಲಾಯಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಬೋಗಿಗಳಿಗೆ ಹೊಂದಿಸಲು ಎಂಜಿನ್ಗಳನ್ನು ಹಿಂದಕ್ಕೆ ತರುವಾಗ ಸರಿಯಾದ ಸಿಗ್ನಲ್ ಸಿಗದೆ ಈ ಅನಾಹುತ ಸಂಭವಿಸಿದೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.
ಘಟನೆಯ ಕಾರಣದಿಂದ ಈ ಫ್ಲಾಟ್ಫಾರಂ ಮೂಲಕ ಬೆಳಿಗ್ಗೆ 6 ಗಂಟೆಗೆ ಹೊರಡಬೇಕಿದ್ದ ಬೆಂಗಳೂರು–ಚೆನ್ನೈ ಮಾರ್ಗದ ಶತಾಬ್ದಿ ಎಕ್ಸ್ಪ್ರೆಸ್ ಹಾಗೂ 6.30ಕ್ಕೆ ಹೊರಡಬೇಕಿದ್ದ ಬೆಂಗಳೂರು– ಚೆನ್ನೈ ಲಾಲ್ಬಾಗ್ ಎಕ್ಸ್ಪ್ರೆಸ್ ರೈಲುಗಳು 15 ನಿಮಿಷ ತಡವಾಗಿ ಒಂದನೇ ಫ್ಲಾಟ್ಫಾರಂನಿಂದ ಹೊರಟವು.
ನಗರ ರೈಲು ನಿಲ್ದಾಣದಲ್ಲೇ ಕಳೆದ ಎರಡು ತಿಂಗಳಲ್ಲಿ ಮೂರು ರೈಲುಗಳು ಹಳಿ ತಪ್ಪಿವೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನ.24ರಂದು ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಬೋಗಿಗಳು ಹಳಿ ತಪ್ಪಿ, ಸಮೀಪದ ಮಹಾತ್ಮಗಾಂಧಿ ರೈಲ್ವೆ ಕಾಲೋನಿಯ ಕಾಂಪೌಂಡ್ಗೆ ಗುದ್ದಿದ್ದವು. ಡಿಸೆಂಬರ್ ತಿಂಗಳಲ್ಲಿ ಆರನೇ ಪ್ಲಾಟ್ಫಾರಂಗೆ ಬರುತ್ತಿದ್ದ ಶತಾಬ್ದಿ ಎಕ್ಸ್ಪ್ರೆಸ್ ಹಳಿ ತಪ್ಪಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.