
ಬೆಂಗಳೂರು: ‘ಕ್ಯಾನ್ಸರ್ ನಿಯಂತ್ರಣ ಹಾಗೂ ಅದರ ಚಿಕಿತ್ಸೆಗೆ ಸಂಬಂಧಿಸಿ ವೈದ್ಯಕೀಯ ಕ್ಷೇತ್ರ ಯಶಸ್ಸು ಸಾಧಿಸಿದೆ. ಆದರೆ, ನಿಜಕ್ಕೂ ಇದರ ಲಾಭ ಪ್ರತಿಯೊಬ್ಬರಿಗೂ ತಲುಪುತ್ತಿದೆಯೇ’ ಎಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಪ್ರಶ್ನಿಸಿದರು.
‘ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸೆಸ್ ಲಿಮಿಟೆಡ್’ (ಎಚ್‌ಸಿಜಿ) ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ನಗರದ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮೂರು ದಿನಗಳ ‘ರಾಷ್ಟ್ರೀಯ ಕ್ಯಾನ್ಸರ್ ಶುಶ್ರೂಷಾ ಸಮಾವೇಶ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ದೇಶದಲ್ಲಿ ಒಟ್ಟು ಆರು ಸಾವಿರ ಗ್ರಾಮಗಳಿವೆ. ಶೇ 70ರಷ್ಟು ಜನ ಇಂದಿಗೂ ಹಳ್ಳಿಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಕ್ಯಾನ್ಸರ್ ಸೇರಿದಂತೆ ಇತರ ಕಾಯಿಲೆಗಳಿಗೆ ಸಂಬಂಧಿಸಿದಂತೆ ಸೂಕ್ತ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ. ಹಾಗಾಗಿ ಅವರನ್ನು ತಲುಪುವುದು ನಮ್ಮ ಮುಂದಿರುವ ದೊಡ್ಡ ಸವಾಲು’ ಎಂದು ಹೇಳಿದರು.
‘ನರ್ಸಿಂಗ್ ಆರೋಗ್ಯ ಕ್ಷೇತ್ರದ ದೊಡ್ಡ ಭಾಗ. ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುತ್ತಿರುವುದರಿಂದ ವೈದ್ಯರ ಜೊತೆಗೇ ಶುಶ್ರೂಷಕಿಯರ ಜವಾಬ್ದಾರಿ ಹೆಚ್ಚಿದೆ. ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆಗೆ ತೆರೆದುಕೊಂಡು ವೃತ್ತಿಯಲ್ಲಿ ಮುಂದುವರೆಯಬೇಕು’ ಎಂದು ಸಲಹೆ ಮಾಡಿದರು.
‘ನರ್ಸಿಂಗ್ ಕ್ಷೇತ್ರದ ತಾಯಿ ಫ್ಲಾರೆನ್ಸ್ ನೈಟಿಂಗೆಲ್ ಅವರು ಎಲ್ಲ ಶುಶ್ರೂಷಕಿಯರಿಗೆ ಮಾದರಿ. ಯುದ್ಧದ ಸಂದರ್ಭದಲ್ಲೂ ಅವರು ಜೀವದ ಹಂಗು ತೊರೆದು ಯೋಧರ ಉಪಚಾರ ಮಾಡಿದ್ದರು’ ಎಂದು ನೆನಪಿಸಿದರು.
‘ಆಸ್ಪತ್ರೆಗೆ ದಾಖಲಾಗುವ ಪ್ರತಿಯೊಬ್ಬ ರೋಗಿಯ ಹಿನ್ನೆಲೆಯನ್ನು ಶುಶ್ರೂಷಕಿಯರು ತಿಳಿದುಕೊಂಡರೆ ಅವರಿಗೆ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ರೋಗಿ ದಾಖಲಾದ ತಕ್ಷಣ ಆತನೊಂದಿಗೆ ಸಮಾಲೋಚಿಲು ಪ್ರಯತ್ನಿಸಬೇಕು. ಇದರಿಂದ ಆ ವ್ಯಕ್ತಿಗೆ ಯಾವ ರೀತಿಯ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳಬಹುದು’ ಎಂದರು.
‘ಕೆಲವು ಬಾರಿ ರೋಗಿಗಳು ಕಾಯಿಲೆಗಿಂತ ಅವರ ಕೌಟುಂಬಿಕ ಸಮಸ್ಯೆಗಳಿಂದ ಬಳಲುತ್ತ ಇರುತ್ತಾರೆ. ಆದಕಾರಣ ಅವರನ್ನು ಪ್ರೀತಿಯಿಂದ ಕಾಣಬೇಕು’ ಎಂದರು.
‘ವೈದ್ಯಕೀಯ ವೃತ್ತಿಯಲ್ಲಿರುವ ನೀವು ಹುಟ್ಟು, ಸಾವು ನಿರಂತರವಾಗಿ ನೋಡುತ್ತಿರುತ್ತೀರಿ. ಅದು ಸಹಜ ಪ್ರಕ್ರಿಯೆ . ಎಷ್ಟೇ ಒತ್ತಡದಲ್ಲಿದ್ದರೂ ಎಲ್ಲ ರೋಗಿಗಳನ್ನು ಸಹಾನುಭೂತಿಯಿಂದ ಕಾಣುವುದು ಎಲ್ಲಕ್ಕಿಂತ ಮುಖ್ಯವಾದುದು’ ಎಂದು ಶುಶ್ರೂಷಕಿಯೊಬ್ಬರು ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
‘ಶುಶ್ರೂಷಕಿ ಮತ್ತು ರೋಗಿಯ ಸಂಬಂಧ ತಾಯಿ ಮಗುವಿನ ರೀತಿ ಇರಬೇಕು. ಮಗು ಎಷ್ಟೇ ತುಂಟತನ ಮಾಡಿದರೂ ತಾಯಿ ಅದನ್ನು ನಿರ್ಲಕ್ಷಿಸಿ ಪ್ರೀತಿ ತೋರುತ್ತಾಳೆ. ಈ ರೀತಿ ರೋಗಿಗಳೊಂದಿಗೆ ವ್ಯವಹರಿಸಬೇಕು. ವೃತ್ತಿಯಲ್ಲಿ ಅನುಭವ ಹೆಚ್ಚಾದಂತೆ ಈ ಗುಣಗಳು ತಾನಾಗಿಯೇ ಬರುತ್ತವೆ’ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಅಧ್ಯಕ್ಷ ಡಾ. ಬಿ.ಎಸ್. ಅಜಯ್‌ಕುಮಾರ್ ಅವರು ಮಾತನಾಡಿದರು.
‘ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ನಮ್ಮ ಆಸ್ಪತ್ರೆಗಳಲ್ಲಿ ಜಾಗತಿಕ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಗಳಿವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.