ADVERTISEMENT

ಹಸಿದ ಹೊಟ್ಟೆಗೆ ಅನ್ನ ನೀಡಲು ಅಭಿಯಾನ

ಸಮಾರಂಭಗಳಲ್ಲಿ ಮಿಕ್ಕಿದ ಆಹಾರ ಕೊಳೆಗೇರಿ, ಅನಾಥಾಶ್ರಮಗಳಲ್ಲಿ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2016, 19:41 IST
Last Updated 17 ಫೆಬ್ರುವರಿ 2016, 19:41 IST
‘ಚೈಲ್ಡ್‌ ರಿಲೀಫ್‌ ಅಂಡ್‌ ವಿ’ ಸಂಸ್ಥೆಯ ಸದಸ್ಯರು ಬಿಳೇಕಹಳ್ಳಿಯ ಕೊಳೆಗೇರಿ ಮಕ್ಕಳಿಗೆ ಆಹಾರ ವಿತರಿಸುತ್ತಿರುವುದು
‘ಚೈಲ್ಡ್‌ ರಿಲೀಫ್‌ ಅಂಡ್‌ ವಿ’ ಸಂಸ್ಥೆಯ ಸದಸ್ಯರು ಬಿಳೇಕಹಳ್ಳಿಯ ಕೊಳೆಗೇರಿ ಮಕ್ಕಳಿಗೆ ಆಹಾರ ವಿತರಿಸುತ್ತಿರುವುದು   

ಬೆಂಗಳೂರು: ಸಮಾರಂಭಗಳಲ್ಲಿ ಪ್ರತಿ ವರ್ಷ ನೂರಾರು ಟನ್‌ ಆಹಾರ ವ್ಯರ್ಥವಾಗಿ ಕಸದ ಬುಟ್ಟಿ ಸೇರುತ್ತದೆ. ಸಂಸ್ಥೆಯೊಂದು  ಮಿಕ್ಕಿದ ಆಹಾರವನ್ನು ಕೊಳೆಗೇರಿ, ಅನಾಥಾಶ್ರಮಗಳಲ್ಲಿ ಹಂಚುವ ಮೂಲಕ ಹಸಿದ ಹೊಟ್ಟೆಗಳನ್ನು ತುಂಬಿಸುತ್ತಿದೆ. ಸಮಾನ ಮನಸ್ಕರು ಸೇರಿ ಆರಂಭಿಸಿರುವ ‘ಚೈಲ್ಡ್‌ ರಿಲೀಫ್‌ ಅಂಡ್‌ ವಿ’ ಈ ಕೆಲಸ ಮಾಡುತ್ತಿರುವ ಸಂಸ್ಥೆ.

‘ಅನ್ನ ಚಿನ್ನಕ್ಕೆ ಸಮ. ಅದರ ಹಿಂದೆ ಸಾವಿರಾರು ರೈತರ ಶ್ರಮ ಇದೆ. ಪ್ರತಿ ದಿನ ಒಂದು ಹೊತ್ತಿನ ಊಟಕ್ಕೆ ಇಲ್ಲದ ಜನ ನಗರದಲ್ಲಿದ್ದಾರೆ. ಅಂಥವರ ಹೊಟ್ಟೆ ತುಂಬಿಸುವುದು ಸಂಸ್ಥೆಯ ಉದ್ದೇಶ’ ಎನ್ನುತ್ತಾರೆ ಸಂಸ್ಥೆಯ ಸಂಸ್ಥಾಪಕಿ ಅನಿತಾ. ‘ಖಾಸಗಿ ಕಂಪೆನಿ ಉದ್ಯೋಗಿಗಳು, ಗೃಹಿಣಿಯರು ಸೇರಿದಂತೆ ಸಂಸ್ಥೆಯಲ್ಲಿ 50ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದಾರೆ. ಪ್ರತಿ ಭಾನುವಾರ ಸಂಜೆ ಆಹಾರವನ್ನು ಹಂಚಲಾಗುತ್ತದೆ’ ಎಂದರು.

‘ಹುಟ್ಟುಹಬ್ಬದ ಸಮಾರಂಭ, ವಿವಾಹ ವಾರ್ಷಿಕೋತ್ಸವ, ಕಲ್ಯಾಣ ಮಂಟಪಗಳಲ್ಲಿ ನಡೆಯುವ ಕಾರ್ಯಕ್ರಮಗಳು ಹೀಗೆ ವಿವಿಧ ಸಮಾರಂಭಗಳಲ್ಲಿ ಆಹಾರ ಉಳಿದರೆ ಅಂಥವರು ಕರೆ ಮಾಡುತ್ತಾರೆ. ಕೂಡಲೇ  ಸಂಸ್ಥೆಯ ಸದಸ್ಯರೊಂದಿಗೆ ಅಲ್ಲಿಗೆ ತೆರಳಿ ಆಹಾರವನ್ನು ತೆಗೆದುಕೊಂಡು ಹೋಗಿ ಹಂಚಲಾಗುತ್ತದೆ’ ಎಂದು ಹೇಳಿದರು.

‘ಸಾರ್ವಜನಿಕರಿಂದ ಕರೆ ಬರದಿದ್ದರೆ ನಾವೇ ಆಹಾರವನ್ನು ಸಿದ್ಧಪಡಿಸುತ್ತೇವೆ. ವೆಜ್‌ ಪಲಾವ್, ಮೊಸರನ್ನ ತಯಾರಿಸಿ ಹಂಚಲಾಗುತ್ತದೆ’ ಎಂದು ಅವರು ತಿಳಿಸಿದರು. ‘ಕೋರಮಂಗಲ, ಮೆಜೆಸ್ಟಿಕ್, ಮಡಿವಾಳ, ಜೆ.ಪಿ.ನಗರ ಸೇರಿದಂತೆ ನಗರದ ವಿವಿಧ 60 ಕಡೆಗಳಲ್ಲಿ ಈ ರೀತಿ ಆಹಾರ ಹಂಚಲಾಗಿದೆ’ ಎಂದು ತಿಳಿಸಿದರು.

‘ಆಹಾರ ತಯಾರಿಸಲು ₹ 6–7 ಸಾವಿರ ಖರ್ಚಾಗುತ್ತದೆ. ಈ ಖರ್ಚನ್ನು ಸಂಸ್ಥೆಯ ಸದಸ್ಯರು ಹಂಚಿಕೊಳ್ಳುತ್ತೇವೆ. ಸಾರ್ವಜನಿಕರು ಸಹ ಅಕ್ಕಿ, ಬೇಳೆ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಒದಗಿಸುತ್ತಾರೆ’ ಎಂದು ಅವರು ಹೇಳಿದರು. ‘ಫೆ.14ರ ರಾತ್ರಿ 8 ಗಂಟೆ ಸುಮಾರಿಗೆ ಜೆ.ಪಿ.ನಗರದ ನಿವಾಸಿಯೊಬ್ಬರು ಕರೆ ಮಾಡಿದರು. ಸದಸ್ಯರೊಂದಿಗೆ ಅಲ್ಲಿಗೆ ಹೋಗಿ ಅಲ್ಲಿನ ಕೊಳೆಗೇರಿಯ 200ಕ್ಕೂ ಹೆಚ್ಚು ನಿವಾಸಿಗಳಿಗೆ ಆಹಾರವನ್ನು ಹಂಚಲಾಯಿತು’ ಎಂದು ವಿವರಿಸಿದರು.

‘ಒಮ್ಮೆ ಕೋರಮಂಗಲದ ಸಿಗ್ನಲ್‌ನಲ್ಲಿ ನಿಂತಿದ್ದ ವೇಳೆ ಪುಟ್ಟ ಪುಟ್ಟ ಮಕ್ಕಳು ಭಿಕ್ಷೆ ಬೇಡುತ್ತಿದ್ದರು. ಅವರಿಗೆ ಹಣ ಕೊಡಲು ಹೋದಾಗ, ಹಣ ಬೇಡ ಊಟ ಬೇಕು ಎಂದು ಕೇಳಿದರು. ಆಗ ಅನ್ನದ ಮಹತ್ವ ತಿಳಿಯಿತು’ ಎಂದು ಅವರು ವಿವರಿಸಿದರು. ‘ಈ ಘಟನೆಯ ನಂತರ ಊಟ ಸಿಗದವರಿಗೆ ಏನಾದರೂ ಸಹಾಯ ಮಾಡಬೇಕು ಎಂಬ ಯೋಚನೆ ಹೊಳೆಯಿತು. ಆಗ ಸ್ನೇಹಿತರೊಂದಿಗೆ ಈ ವಿಷಯವನ್ನು ಹಂಚಿಕೊಂಡೆ. ಅದರ ಫಲವಾಗಿ ಈ ಸಂಸ್ಥೆ ಹುಟ್ಟಿಕೊಂಡಿತು’ ಎಂದು ತಿಳಿಸಿದರು.

‘ಸಂಸ್ಥೆಯಲ್ಲಿರುವ ಬಹುತೇಕ ಮಂದಿ ಉದ್ಯೋಗಿಗಗಳು. ಭಾನುವಾರ ಬಿಟ್ಟು ಉಳಿದ ದಿನಗಳಲ್ಲಿ ಅವರಿಗೆ ಬಿಡುವು ಇರುವುದಿಲ್ಲ. ಹೀಗಾಗಿ ಭಾನುವಾರ ಆಹಾರ ವಿತರಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಬಟ್ಟೆ ವಿತರಣೆ: ಆಹಾರ ಹಂಚುವ ಜತೆಗೆ ಬಟ್ಟೆಯನ್ನು ಸಹ ವಿತರಣೆ ಮಾಡಲಾಗುತ್ತದೆ. ಬಳಸಿದ ಹಳೆಯ ಬಟ್ಟೆಗಳನ್ನು ಜನರು ನಮಗೆ ನೀಡುತ್ತಾರೆ. ಅವುಗಳನ್ನು ಶುಚಿಗೊಳಿಸಿ ಕೊಳೆಗೇರಿ ನಿವಾಸಿಗಳು, ರಸ್ತೆ ಬದಿ ವಾಸಿಸುವ ನಿರ್ಗತಿಕರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ಸಂಪರ್ಕಕ್ಕೆ: 88842 83329.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.