ADVERTISEMENT

ಹಸಿರಿಗಾಗಿ ನಡಿಗೆ ಜಾಥಾ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ‘ಮುಂದಿನ ಆರು ತಿಂಗಳಿ­ನಲ್ಲಿ ನಗರವನ್ನು ಸಂಪೂರ್ಣ ಕಸಮುಕ್ತ ಮತ್ತು ಹಸಿರುಮಯ­ಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗು­ವುದು’ ಎಂದು ನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌ ‘ವಿಶ್ವ ಹಸಿರು ದಿನ’ದ ಅಂಗ­ವಾಗಿ ಭಾನುವಾರ ಕಬ್ಬನ್‌ ಉದ್ಯಾನ­ದಲ್ಲಿ ಆಯೋಜಿಸಿದ್ದ ನಡಿಗೆ ಜಾಥಾಗೆ ಚಾಲನೆ ನೀಡಿ ಅವರು ಮಾತ­ನಾಡಿದರು.

‘ನಗರವನ್ನು ಕಸಮುಕ್ತ ಮತ್ತು ಹಸಿರು­ಮಯಗೊಳಿಸಲು ಸಾರ್ವಜನಿ­ಕರ ಬೆಂಬಲ ಅಗತ್ಯ. ಈ ನಿಟ್ಟಿನಲ್ಲಿ ಜಾಥಾ ಆಯೋಜಿಸಿರುವುದು ಅಭಿ­ನಂದ­ನೀಯ. ಜಾಥಾ ಮೂಲಕ ಸ್ವಚ್ಛತೆ ಹಾಗೂ ಹಸಿರಿನ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌ನ ಅಧ್ಯಕ್ಷ ಸಯ್ಯದ್‌ ಮಹ­ಮ್ಮದ್‌ ಬ್ಯಾರಿ ಮಾತನಾಡಿ, ‘ಜಾಥಾ­ದಲ್ಲಿ ನಗರದ ಸುಮಾರು ಮೂರು ಸಾವಿರ ಮಂದಿ ಪಾಲ್ಗೊಂಡಿದ್ದಾರೆ. ನಗರದ ಜನ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಜನರಿಗೆ ಹೆಚ್ಚಿನ ಜಾಗೃತಿ ನೀಡಬೇಕೆಂಬ ಉದ್ದೇಶದಿಂದ ಜಾಥಾ ಆಯೋಜಿಸಲಾಗಿದೆ’ ಎಂದರು.

ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀ­ನಾರಾ­ಯಣ ಮಾತನಾಡಿ, ‘ಜಾಥಾದ ಮೂಲಕ ಜನರಿಗೆ ಹಸಿರು ಹಾಗೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾ­ಗುತ್ತಿದೆ. ಈ ನಿಟ್ಟಿನಲ್ಲಿ ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌ನ ಕಾರ್ಯ ಪ್ರಶಂಸನೀಯ’ ಎಂದು ಹೇಳಿದರು.

ಜಾಥಾದಲ್ಲಿ ವಿವಿಧ ಕಂಪೆನಿಗಳ ಉದ್ಯೋಗಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಬ್ಬನ್‌ ಉದ್ಯಾನದ ಕ್ವೀನ್ಸ್‌ ವೃತ್ತದಿಂದ ಸೇಂಟ್‌ ಮಾರ್ಕ್ಸ್‌ ರಸ್ತೆ, ವಿಠ್ಠಲ್‌ ಮಲ್ಯ ರಸ್ತೆ, ಕೇಂದ್ರೀಯ ಗ್ರಂಥಾಲಯದವರೆಗೆ ಜಾಥಾ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.