ADVERTISEMENT

ಹಸಿರು ಆಧಾರಿತ ಅಭಿವೃದ್ಧಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST
ಹಸಿರು ಆಧಾರಿತ ಅಭಿವೃದ್ಧಿ ಅಗತ್ಯ
ಹಸಿರು ಆಧಾರಿತ ಅಭಿವೃದ್ಧಿ ಅಗತ್ಯ   

ಬೆಂಗಳೂರು: `ಭವಿಷ್ಯದ ಬಗ್ಗೆ ಸರಿಯಾದ ದೃಷ್ಟಿಕೋನ ಇಲ್ಲದ ಅಭಿವೃದ್ಧಿ ಪ್ರಗತಿಗೆ ಮಾರಕ~ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟರು.

ಪರಿಸರ ಸಮತೋಲನದೊಂದಿಗೆ ಸುಸ್ಥಿರ ಪ್ರಗತಿ ಸಾಧಿಸಬೇಕು. ಆದರೆ, ಪ್ರಗತಿಯ ಕೊಡಲಿಗೆ ಮರಗಳು ಬಲಿಯಾಗುತ್ತಿವೆ. 4 ಲಕ್ಷ ಜನಸಂಖ್ಯೆಯನ್ನು ಒಳಗೊಳ್ಳಬಹುದಾದ ಬೆಂಗಳೂರು ಸದ್ಯ 80 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವುದೇ ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರು.

ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಂಗಸಂಸ್ಥೆ `ಭಾರತೀಯ ಹಸಿರು ಕಟ್ಟಡಗಳ ಮಂಡಳಿಯ (ಐಜಿಬಿಸಿ) ಕರ್ನಾಟಕ ಶಾಖೆಯು ಇಲ್ಲಿ `ವಿಶ್ವ ಹಸಿರು ಕಟ್ಟಡಗಳ ಸಪ್ತಾಹ~ದ ಅಂಗವಾಗಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ಐಜಿಬಿಸಿ~ ಮುಂದಿಟ್ಟಿರುವ ಹಸಿರು ಮನೆ ಯೋಜನೆ ಪ್ರಸ್ತುತವಾಗಿದೆ. ಹಸಿರು ಆಧಾರಿತ ಅಭಿವೃದ್ಧಿ ಈಗಿನ ಅಗತ್ಯ. ಆದರೆ, ಇದನ್ನು ಜಾರಿಗೊಳಿಸಲು ಕೆಲವು ನಿಯಮಗಳ ಅಗತ್ಯವಿದೆ. ಸರ್ಕಾರ ಆ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯತ್ನಗಳನ್ನು ನಡೆಸಬೇಕು ಎಂದರು.

ಸಾಲು ಮರದ ತಿಮ್ಮಕ್ಕ, ಡಾ.ಮೀನಾಕ್ಷಿ ಭರತ್, ಎನ್.ಎಸ್ ರಮಾಕಾಂತ್, ನಾಗೇಶ ಹೆಗಡೆ, ಪಾಪಮ್ಮ, ವಿ.ಎಸ್. ಶ್ರೀರಾಮ್, ಗಿರೀಶ್ ಭಾರದ್ವಾಜ್, ಅಹ್ಮದ್‌ಖಾನ್, ಡಾ. ಡಿ. ಚಂದ್ರಶೇಖರ ಚೌಟ, ಪಿ.ಬಿ ರಾಮಮೂರ್ತಿ ಸೇರಿದಂತೆ ಸಂಘ ಸಂಸ್ಥೆಗಳಿಗೆ ಪ್ರಸಕ್ತ ಸಾಲಿನ `ಐಜಿಬಿಸಿ~ ಗ್ರೀನ್ ಚಾಂಪಿಯನ್ಸ್ ಪ್ರಶಸ್ತಿಗಳನ್ನು ನೀಡಲಾಯಿತು.

ಡಾ. ಚಂದ್ರಶೇಖರ್ ಹರಿಹರನ್, ಪರಿಸರವಾದಿ ಸುರೇಶ್ ಹೆಬ್ಳೀಕರ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.