ADVERTISEMENT

ಹಾಡಹಗಲೇ ವೃದ್ಧೆಯ ಕೊಲೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 20:14 IST
Last Updated 14 ಡಿಸೆಂಬರ್ 2013, 20:14 IST
ಜಯನಗರ ಸಮೀಪದ ಬೈರಸಂದ್ರದಲ್ಲಿ ಶನಿವಾರ ಕೊಲೆಯಾದ ಪುಷ್ಪಾ (ಒಳಚಿತ್ರ) ಅವರ ಮನೆ ಬಳಿ ಜಮಾಯಿಸಿದ್ದ ಜನ	– ಪ್ರಜಾವಾಣಿ ಚಿತ್ರ
ಜಯನಗರ ಸಮೀಪದ ಬೈರಸಂದ್ರದಲ್ಲಿ ಶನಿವಾರ ಕೊಲೆಯಾದ ಪುಷ್ಪಾ (ಒಳಚಿತ್ರ) ಅವರ ಮನೆ ಬಳಿ ಜಮಾಯಿಸಿದ್ದ ಜನ – ಪ್ರಜಾವಾಣಿ ಚಿತ್ರ   

ಬೆಂಗಳೂರು: ದುಷ್ಕರ್ಮಿಗಳು ಪುಷ್ಪಾ (62) ಎಂಬುವರ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು, ಬಳಿಕ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಯನಗರ ಸಮೀಪದ ಬೈರ­ಸಂದ್ರದಲ್ಲಿ ಶನಿವಾರ ನಡೆದಿದೆ.

ಮಧ್ಯಾಹ್ನ 3.30 ರಿಂದ 4.30ರ ಅಂತರದಲ್ಲಿ ಈ ಕೊಲೆ ನಡೆದಿದೆ. ಘಟನೆ ನಡೆದ ಸಂದರ್ಭದಲ್ಲಿ ಮೃತರ ಸೊಸೆ ಶ್ರೀದೇವಿ, ನಾಲ್ಕು ವರ್ಷದ ಮಗ­ನೊಂದಿಗೆ ಕೋಣೆಯಲ್ಲಿಯೇ ಮಲಗಿ­ದ್ದರೂ, ಕೆಲಸದಾಕೆ ಮನೆಗೆ ಬರುವ­ವರೆಗೂ ಪ್ರಕರಣ ಅವರ ಅರಿವಿಗೆ ಬಂದಿ­ರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪುಷ್ಪಾ ಅವರ ಪತಿ ವಿ.ಕೆ.ನಟರಾಜ್ ಹಾಗೂ ಮಗ ಸೇಂಥಿಲ್‌ ಬೊಮ್ಮಸಂದ್ರ­ದಲ್ಲಿ ಟೈರ್‌ ಮಾರಾಟ ಮಳಿಗೆ ಇಟ್ಟುಕೊಂಡಿದ್ದಾರೆ. ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಿದ್ದ ಅವರು, ಎರಡು ಗಂಟೆ ಸುಮಾರಿಗೆ ಪುನಃ ವಾಪಸ್‌ ಹೋಗಿ­ದ್ದರು. ಬಳಿಕ ಸೊಸೆ ಜ್ವರದಿಂದ ಬಳಲು­ತ್ತಿದ್ದ ಮಗನೊಂದಿಗೆ ಕೋಣೆಗೆ ತೆರಳಿ ನಿದ್ರೆ ಮಾಡುತ್ತಿದ್ದರು. ಆಗ ಮನೆಗೆ ನುಗ್ಗಿ­ರುವ ದುಷ್ಕರ್ಮಿಗಳು, ಪುಷ್ಪಾ ಅವರ ತಲೆಗೆ ಹೊಡೆದು ಬಳಿಕ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜೆ 4.30ರ ಸುಮಾರಿಗೆ ಮನೆಗೆಲ­ಸದಾಕೆ ಸರೋಜ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ನಡುಮನೆ­ಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪುಷ್ಪಾ ಅವರನ್ನು ಕಂಡು ಗಾಬರಿಗೊಂಡ ಸರೋಜಾ, ಚೀರಿಕೊಂಡು ಹೊರಗೆ ಓಡಿದ್ದಾರೆ. ಬಳಿಕ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ ಅವರು, ಪತಿಯ ಸಲಹೆಯಂತೆ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ತೆರಳಿದ ಸಿದ್ದಾ­ಪುರ ಪೊಲೀಸರು, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ದರು.

‘ನಡುಮನೆಯ ಮೇಜಿನ ಮೇಲೆ ತಿಂಡಿ ತಿಂದಿರುವ ಪ್ಲೇಟ್‌ ಹಾಗೂ ಅರ್ಧ ಟೀ ಕುಡಿದಿರುವ ಲೋಟ ಇದೆ. ಅಲ್ಲದೇ, ಮನೆಯ ಪ್ರವೇಶ ದ್ವಾರ ಗಾಜಿನಿಂದ ಕೂಡಿದ್ದು, ಅದಕ್ಕೆ ಹೊಂದಿಕೊಂಡಂ­ತೆಯೇ ಮತ್ತೊಂದು ಕಬ್ಬಿಣದ ಸರಳಿನ (ಗ್ರಿಲ್‌) ಬಾಗಿಲು ಇದೆ. ದುಷ್ಕರ್ಮಿಗಳು ಬಲವಂತವಾಗಿ ಒಳಗೆ ಬಂದಿದ್ದರೆ ಬಾಗಿಲಿನ ಸದ್ದು ಸೊಸೆಗೆ ಕೇಳಿಸುತ್ತಿತ್ತು. ಅಲ್ಲದೇ,  ಮೃತರ ಮೈಮೇಲಿದ್ದ ಒಡವೆ­ಗಳು ಕಳವಾಗಿಲ್ಲ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಪರಿಚಿತರೆ ಯಾವುದೋ ನೆಪದಲ್ಲಿ ಮನೆಗೆ ಬಂದು ಅವರನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಎಚ್‌.ಎಸ್‌.ರೇವಣ್ಣ ಪ್ರಜಾವಾಣಿಗೆ ತಿಳಿಸಿದರು.

‘ಪರಪ್ಪನ ಅಗ್ರಹಾರದಲ್ಲಿ ಪುಷ್ಪಾ ಅವರಿಗೆ ಸೇರಿದ ಜಮೀನು ಇದ್ದು, ಅದರ ಒಡೆತನದ ವಿಚಾರವಾಗಿ ಸಂಬಂಧಿಕ­ರೊಂ­ದಿಗೆ ವಿವಾದ ಇರುವುದಾಗಿ ಕುಟುಂಬ ಸದಸ್ಯರು ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಕೌಟುಂಬಿಕ ಕಲಹ, ವೈಯಕ್ತಿಕ ದ್ವೇಷ ಸೇರಿದಂತೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ.  ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ತಮಿಳುನಾಡು ಮೂಲದ ನಟರಾಜನ್‌, ಕುಟುಂಬ ಸದಸ್ಯರೊಂದಿಗೆ ಎಂಟು ವರ್ಷಗಳ ಹಿಂದೆ ನಗರಕ್ಕೆ ಬಂದು ಬೈರಸಂದ್ರದಲ್ಲಿ ವಾಸವಾಗಿದ್ದಾರೆ. ಅವರಿಗೆ ಸೇಂಥಿಲ್‌ ಅಲ್ಲದೇ ಶಶಿ, ವಸಂತ ಮತ್ತು ಗೀತಾಂಜಲಿ ಎಂಬ ಮಕ್ಕಳಿದ್ದು ಪ್ರತ್ಯೇಕವಾಗಿ ವಾಸವಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಥೈರೈಡ್‌ಗೆ ಶಸ್ತ್ರಚಿಕಿತ್ಸೆ ಆಗಿತ್ತು

‘ಥೈರೈಡ್‌ ಸಮಸ್ಯೆಯಿಂದ ಬಳಲುತ್ತಿದ್ದ ಪುಷ್ಪಾ ಅವರಿಗೆ ಇತ್ತೀಚೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದರಿಂದಾಗಿ ಅವರಿಗೆ ಮಾತನಾಡಲು ಆಗುತ್ತಿರಲಿಲ್ಲ. ಅದೇ ಕಾರಣದಿಂದ ದುಷ್ಕರ್ಮಿಗಳು ಮನೆಗೆ ನುಗ್ಗಿದಾಗ ಪುಷ್ಪಾ ಅವರಿಗೆ ಕಿರುಚಿಕೊಳ್ಳಲು ಸಾಧ್ಯವಾಗಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು.

ಸರ, ಬಳೆ ಕಳವು
ಪುಷ್ಪಾ ಅವರ ಮೈಮೇಲಿದ್ದ ಆಭರಣ ಕಳವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ‘ದುಷ್ಕರ್ಮಿಗಳು, ಪುಷ್ಪಾ ಅವರನ್ನು ಕೊಲೆ ಮಾಡಿ ಮೈಮೇಲಿದ್ದ ಚಿನ್ನದ ಸರ ಹಾಗೂ ಎರಡು ಬಳೆಗಳನ್ನು ದೋಚಿದ್ದಾರೆ. ಮಾಂಗಲ್ಯ ಸರ ಕುತ್ತಿಗೆಯಲ್ಲಿಯೇ ಇದೆ’ ಎಂದು ಮೃತರ ಸಂಬಂಧಿಕರಾದ ಸಕ್ಕುಬಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT