ADVERTISEMENT

ಹಿರಿಯ ಜೀವಗಳ ಮೆಚ್ಚುಗೆ ಉದ್ಗಾರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:10 IST
Last Updated 20 ಅಕ್ಟೋಬರ್ 2012, 19:10 IST

ಬೆಂಗಳೂರು:  ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಹಿರಿಯ ಜೀವಗಳು ಶನಿವಾರ `ನಮ್ಮ ಮೆಟ್ರೊ~ದಲ್ಲಿ ಸಂಚರಿಸಿ ಖುಷಿ ಅನುಭವಿಸಿದವು. `ಎಂತಹಾ ಅಚ್ಚುಕಟ್ಟು, ಎಷ್ಟೊಂದು ಸೂಕ್ಷ್ಮ ತಂತ್ರಜ್ಞಾನ, ಟ್ರಾಫಿಕ್ ಕಿರಿಕಿರಿಯೇ ಇಲ್ಲ...~ ಇಂತಹ ಉದ್ಗಾರಗಳಿಗೆ ಅಲ್ಲಿ ಕೊನೆಯೇ ಇರಲಿಲ್ಲ.


ಶತಾಯುಷಿಗಳಾದ ಗುಲ್ಬರ್ಗದ ವಿದ್ಯಾಧರ ಗುರೂಜಿ, ಬೈಲಹೊಂಗಲದ ಸೋಮಲಿಂಗಪ್ಪ ದೊಡವಾಡ, ಹುಕ್ಕೇರಿಯ ಶಿವಪ್ಪ ಉಂಡಾಳಿ ಅವರಂತೂ ಮೆಟ್ರೊ ಸೊಬಗಿಗೆ ಮನಸೋತು ಬಿಟ್ಟಿದ್ದರು. `ಇಂತಹ ಸೌಲಭ್ಯ ಎಲ್ಲ ಕಡೆ ಬರಬೇಕು~ ಎಂದು ಸದಾಶಿವ ಭೋಸಲೆ ಆಶಿಸಿದರು. `ಗದ್ದಲ ಇಲ್ಲ, ಕಾಯುವ ತ್ರಾಸ್ ಇಲ್ಲ, ಬಸ್ಸಿನಂತೆ ಎತ್ತಿ ಒಗೆಯುವುದಿಲ್ಲ; ಇಂತಹ ವ್ಯವಸ್ಥೆ ಯಾರಿಗೆ ಬೇಡ ಹೇಳ್ರಿ~ ಎಂದು ಬೆರಗಿನಿಂದ ಕೇಳಿದವರು ಹುದಲಿಯ ಎಂ.ಬಿ. ದೇಸಾಯಿ.

`ನಾನು ಬಹಳ ಕಡೆ ಮೆಟ್ರೊ ಸೌಲಭ್ಯ ನೋಡಿದ್ದೇನೆ. ಬೆಂಗಳೂರಿನಲ್ಲಿ ಒಳ್ಳೆಯ ಸೌಕರ್ಯ ಕಲ್ಪಿಸಿದ್ದಾರೆ~ ಎಂದು ಬೆನ್ನು ತಟ್ಟಿದವರು ಪಾಟೀಲ ಪುಟ್ಟಪ್ಪ. ಕೆಲವು ಹಿರಿಯ ಜೀವಗಳಿಗೆ ದಶಕಗಳ ಹಿಂದೆ ಗಾಂಧೀಜಿ ಅವರನ್ನು ಭೇಟಿಯಾಗಲು ರೈಲಿನಲ್ಲಿ ಪ್ರಯಾಣಿಸಿದ್ದ ನೆನಪು ಕಾಡಿತು. ಎಲ್ಲರೂ ಮೆಟ್ರೊದಲ್ಲಿ ಬೈಯ್ಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗೆ ಒಂದು ಸುತ್ತು ಹೋಗಿಬಂದರು. ಮೆಟ್ರೊ ಮೇಲೆ ಹೊಗಳಿಕೆ ಸುರಿಮಳೆ ಸುರಿಸುತ್ತಾ ಗಾಂಧಿ ಭವನದತ್ತ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT