ಬೆಂಗಳೂರು: ಮಂಗಳವಾರವಷ್ಟೇ (ನ.21) ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಗೀತಾಂಜಲಿ (27) ಎಂಬುವರು ಮಾರತ್ತಹಳ್ಳಿಯ ಸೆಸ್ನಾ ಟೆಕ್ ಪಾರ್ಕ್ ಕಟ್ಟಡದ 10ನೇ ಮಹಡಿಯಿಂದ ಹಾರಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಟೆಕ್ ಪಾರ್ಕ್‌ನಲ್ಲಿರುವ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು, ಮಧ್ಯಾಹ್ನ 12.30 ಗಂಟೆಯ ಸುಮಾರಿಗೆ ಕಟ್ಟಡದಿಂದ ಜಿಗಿದಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಮಾರತ್ತಹಳ್ಳಿ ಪೊಲೀಸರು ತಿಳಿಸಿದರು.
‘ಗೋವಾದ ಗೀತಾಂಜಲಿ, ಸಹೋದರ ಪ್ರಫುಲ್ ಜತೆ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಅವರಿಬ್ಬರೂ ಒಟ್ಟಿಗೆ ಎಚ್.ಎಸ್.ಆರ್ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅವರ ಪೋಷಕರು ಗೋವಾದಲ್ಲಿದ್ದಾರೆ’ ಎಂದರು.
’ಅವರ ಚಿಕ್ಕಮ್ಮ ವಿಜಯಲಕ್ಷ್ಮಿ ಬನ್ನೇರುಘಟ್ಟ ರಸ್ತೆಯಲ್ಲಿ ವಾಸವಿದ್ದಾರೆ. ನ. 21ರಂದು ಹುಟ್ಟುಹಬ್ಬವಿದ್ದ ಕಾರಣ ಅವರ ಮನೆಗೆ ಹೋಗಿದ್ದ ಗೀತಾಂಜಲಿ ಚಿಕ್ಕಮ್ಮನನ್ನು ಕರೆದುಕೊಂಡು ವಿಮಾನದಲ್ಲಿ ಗೋವಾಕ್ಕೆ ಹೋಗಿದ್ದರು. ಅಲ್ಲಿಯೇ ಪೋಷಕರು ಹಾಗೂ ಸಂಬಂಧಿಕರೊಂದಿಗೆ ಹುಟ್ಟುಹಬ್ಬ ಆಚರಿಸಿದ್ದರು’.
‘ಬುಧವಾರ ಬೆಳಿಗ್ಗೆ 8.30 ಗಂಟೆಯ ಸುಮಾರಿಗೆ ಇಬ್ಬರೂ ಬೆಂಗಳೂರಿಗೆ ಬಂದಿದ್ದರು. ವಿಜಯಲಕ್ಷ್ಮಿ ನೇರವಾಗಿ ಮನೆಗೆ ಹೋದರೆ, ಗೀತಾಂಜಲಿ ಅವರು ಎಚ್‌ಎಸ್‌ಆರ್ ಲೇಔಟ್ ಮನೆಗೆ ಹೋಗಿ ಅಲ್ಲಿಂದ ಕಚೇರಿಗೆ ಬಂದಿದ್ದರು. ಮಧ್ಯಾಹ್ನ 12.10 ಗಂಟೆಗೆ ತಾಯಿಗೆ ಕರೆ ಮಾಡಿ ಮಾತನಾಡಿದ್ದರು. ಅದಾದ 20 ನಿಮಿಷಗಳ ನಂತರ ಮಹಡಿಗೆ ಹೋಗಿ ಹಾರಿದ್ದಾರೆ’ ಎಂದು ಪೊಲೀಸರು ವಿವರಿಸಿದರು.
ಕಾರಣ ನಿಗೂಢ: ‘ಅವರು ಕಂಪೆನಿಯ ಕಚೇರಿಯಿಂದ ಮಹಡಿಗೆ ಹೋಗುವ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅವರ ಆತ್ಮಹತ್ಯೆಗೆ ಕಾರಣ ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ಪೊಲೀಸರು ತಿಳಿಸಿದರು.
‘ಗೋವಾದಲ್ಲಿರುವ ಪೋಷಕರಿಗೆ ವಿಷಯ ತಿಳಿಸಿದ್ದು, ಅವರು ನಗರಕ್ಕೆ ಬರುತ್ತಿದ್ದಾರೆ. ಬಂದ ಬಳಿಕವೇ ಮರಣೋತ್ತರ ಪರೀಕ್ಷೆ ನಡೆಸಲಿದ್ದೇವೆ. ಸಹೋದರ, ಚಿಕ್ಕಮ್ಮ ಹಾಗೂ ಪೋಷಕರ ಹೇಳಿಕೆ ದಾಖಲಿಸಿಕೊಳ್ಳಬೇಕಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.