ಬೆಂಗಳೂರು: ‘ವಿಧಾನ ಪರಿಷತ್ ಸದಸ್ಯರು, ತಮಗೂ ವಿಧಾನ ಸಭೆ ಸದಸ್ಯರ ಅಧಿಕಾರ ಬೇಕು ಎಂದು ಕೇಳಬಾರದು. ಪರಿಷತ್ ಸದಸ್ಯರ ಜವಾಬ್ದಾರಿ ಅವರಿಗಿಂತ ಹೆಚ್ಚಿನದು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅಭಿಪ್ರಾಯಪಟ್ಟರು.
ಕರ್ನಾಟಕ ಪಂಚಾಯತ್ ಪರಿಷತ್ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನೂತನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
‘ವಿಧಾನ ಪರಿಷತ್ತಿನ ಸದಸ್ಯತ್ವವನ್ನು ತಪ್ಪಾಗಿ ಅರ್ಥೈಸಲಾಗಿದೆ. ನಿಮಗೆ ಕ್ಷೇತ್ರವೇ ಇಲ್ಲ. ಆದರೂ ಕ್ಷೇತ್ರ ನಿರ್ಮಾಣ ಮಾಡಲಾಗಿದೆ. ಹಾಗಂತ ಆರಿಸಿ ಬಂದ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳ್ಳದೆ, ಇಡೀ ರಾಜ್ಯಕ್ಕೆ ಸೇವೆ ಸಲ್ಲಿಸಬೇಕು’ ಎಂದರು.
ಶಾಸಕಾಂಗವನ್ನು ಸರಿದಾರಿಗೆ ತರುವ ಜವಾಬ್ದಾರಿ ವಿಧಾನ ಪರಿಷತ್ತಿಗೆ ಇದೆ. ಅದಕ್ಕಾಗಿಯೇ ಚಿಂತಕರ ಚಾವಡಿ ಎಂದು ಕರೆಯುವುದು. ಸರ್ಕಾರಕ್ಕೆ ಉತ್ತಮ ಸಲಹೆಗಳನ್ನು ನೀಡುವುದರ ಜೊತೆಗೆ ಎಚ್ಚರಿಸುವ ಹೊಣೆಯೂ ಪರಿಷತ್ತಿಗೆ ಇದೆ ಎಂದರು.
ಚುನಾವಣಾ ಆಯೋಗ ಕುರುಡು: ಚುನಾವಣೆಯ ಪದ್ಧತಿ ಸಂಪೂರ್ಣವಾಗಿ ಹಾಳಾಗಿದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯೂ ಬೇರೆ ಚುನಾವಣೆಗಳಂತೆ ನಡೆದಿದೆ. ಪರಿಷತ್ ಅಭ್ಯರ್ಥಿಗಳಿಗೂ ವೆಚ್ಚ ಮಿತಿ ಹೇರದಿರುವುದು ಚುನಾವಣಾ ಆಯೋಗ ಕುರುಡಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಸಚಿವ ಎಚ್.ಕೆ. ಪಾಟೀಲ್ ಅವರು ಹೇಳಿದರು. ಕರ್ನಾಟಕ ಪಂಚಾಯತ್ ಪರಿಷತ್‌ನ ಅಧ್ಯಕ್ಷ ಸಿ. ನಾರಾಯಣಸ್ವಾಮಿ, ಸಂಚಾಲಕಿ ಮಾಗಡಿ ಕಮಲಮ್ಮ, ಪ್ರಧಾನ ಕಾರ್ಯದರ್ಶಿ ಎಲ್. ಗೋಪಾಲಕೃಷ್ಣ ಗೌಡ ಉಪಸ್ಥಿತರಿದ್ದರು.
‘ಹಳ್ಳಿಗಳು ವೃದ್ಧಾಶ್ರಮಗಳಾಗಿವೆ’
‘ಗ್ರಾಮೀಣ ಪ್ರದೇಶದ ಮನೆಗಳು ವೃದ್ಧಾಶ್ರಮಗಳಂತಾಗಿವೆ’ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರ ಮೂರ್ತಿ ಕಳವಳ ವ್ಯಕ್ತಪಡಿಸಿದರು.
‘ಹಳ್ಳಿಗಳಲ್ಲಿ ವೃದ್ಧರು ಮಾತ್ರ ಕಾಣಿಸುತ್ತಿದ್ದಾರೆ. ಶಿಕ್ಷಿತ ಯುವಕರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ವಿಚಿತ್ರ ಸಮಸ್ಯೆಗಳು ಉಂಟಾಗಿವೆ. ಕುಡಿಯುವ ನೀರು, ವಸತಿ ಸಮಸ್ಯೆಗಳ ಜೊತೆಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಳ್ಳಿಗರು ಅಲ್ಲೇ ಇರುವಂತೆ ಮಾಡುವ ರೀತಿಯಲ್ಲಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡುವ ಅಗತ್ಯವಿದೆ’ ಎಂದರು.
‘ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸರ್ಕಾರದ ಉತ್ತಮ ನಡೆ. ಆದರೆ, ಗ್ರಾಮಗಳಿಗೆ ಜವಾಬ್ದಾರಿ, ಹಕ್ಕುಗಳನ್ನು ನೀಡುವ ಮೊದಲು ತಯಾರಿ ನಡೆಸುವ ಅಗತ್ಯವಿದೆ. ದೇಶದ ಕಾನೂನುಗಳು ಉತ್ತಮವಾಗಿವೆ. ಅವುಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಇದಕ್ಕೆ ಸರ್ಕಾರ ಮಾತ್ರ ಹೊಣೆಯಲ್ಲ. ಇಡೀ ಸಮಾಜ ಜಾಗೃತವಾಗಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.