ಬೆಂಗಳೂರು: ಒಂದರಿಂದ ನಾಲ್ಕು ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕ್ಷಯರೋಗ ತೀವ್ರತರದ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಹತ್ತಕ್ಕೂ ಹೆಚ್ಚು ಕ್ಷಯಪೀಡಿತ ಶಿಶುಗಳು ಪ್ರತಿ ತಿಂಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಸೋಂಕು ಪೋಷಕರಿಂದ ಮಕ್ಕಳಿಗೆ ಹರಡಿರುತ್ತದೆ’ ಎಂದು ವಾಣಿ ವಿಲಾಸ ಆಸ್ಪತ್ರೆಯ ಶಿಶುತಜ್ಞೆ ಡಾ.ಆಶಾ ಬೆನಕಪ್ಪ ತಿಳಿಸಿದರು.
‘ಮಕ್ಕಳಿಂದ ಮಕ್ಕಳಿಗೆ ಈ ರೋಗ ಹರಡುವ ಸಾಧ್ಯತೆ ತೀರಾ ಕಡಿಮೆಯಿದೆ. ಮಕ್ಕಳಿಗೆ ಈ ಸೋಂಕು ತಗುಲಿದರೆ ತೀವ್ರತರದ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅದರಲ್ಲೂ ಐದು ವರ್ಷದ ಒಳಗಿನ ಮಕ್ಕಳು ಚೇತರಿಸಿಕೊಳ್ಳಲು ಕಷ್ಟಪಡುತ್ತಾರೆ’ ಎಂದು ಹೇಳಿದರು.
‘ಕ್ಷಯ ರೋಗದ ಜತೆ ಎಚ್‌ಐವಿ ಸೋಂಕಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು’ ಎಂದರು.
ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಶಿಶುತಜ್ಞ ಡಾ.ಸಾಯಿ ಪ್ರಸಾದ್, ‘ಕ್ಷಯರೋಗ ಪೀಡಿತ ಮಕ್ಕಳ ಕುರಿತು ಹೆಚ್ಚಿನ ನಿಗಾ ವಹಿಸಬೇಕು. ಅಲ್ಲದೇ ಕ್ಯಾನ್ಸರ್ ಹಾಗೂ ಅಂಗಾಂಗ ಕಸಿಗೆ ಒಳಗಾದವರಲ್ಲಿ ಕ್ಷಯ ರೋಗ ಕಾಣಿಸಿಕೊಂಡರೆ ಆರೋಗ್ಯ ಸಮಸ್ಯೆ ಉಲ್ಬಣಗೊಳ್ಳುತ್ತದೆ’ ಎಂದರು.
‘ಸರ್ಕಾರ ಉಚಿತವಾಗಿ ಔಷಧ ನೀಡುತ್ತಿದ್ದರೂ ಸಮರ್ಪಕವಾಗಿ ಚಿಕಿತ್ಸೆ ಪಡೆದುಕೊಳ್ಳುವವರ ಸಂಖ್ಯೆ ಕಡಿಮೆಯಿದೆ. ಹಾಗಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.