ADVERTISEMENT

‘ಹೆಸರಿಗೆ ಕಳಂಕ ತರಲು ತಿರುಚಿದ ಫೋಟೊ ಬಳಕೆ’

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 20:04 IST
Last Updated 25 ಅಕ್ಟೋಬರ್ 2017, 20:04 IST

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿ ಹಾಗೂ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಜೈಲಿನ ಹೊರಗಡೆ ತೆಗೆಸಿಕೊಂಡಿದ್ದಾರೆ ಎನ್ನಲಾದ ಫೋಟೊ ಬಗ್ಗೆ ವಿಚಾರಣೆ ನಡೆಸಿದ ಅಧೀಕ್ಷಕರು, ಕಾರಾಗೃಹ ಇಲಾಖೆಯ ಉನ್ನತ ಅಧಿಕಾರಿಗೆ ಬುಧವಾರ ವರದಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾ ಕೊಲೆ ಪ್ರಕರಣದ ಅಪರಾಧಿ ಕ್ಯಾಬ್ ಚಾಲಕ ಶಿವಕುಮಾರ್ ಹಾಗೂ ಕಾರಾಗೃಹದ ಭದ್ರತೆಗೆ ನಿಯೋಜನೆಗೊಂಡಿರುವ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಫೋಟೊದಲ್ಲಿದ್ದರು. ಆ ಇಬ್ಬರನ್ನು ವಿಚಾರಣೆಗೆ ಒಳಪಡಿಸಿ, ಅವರ ಹೇಳಿಕೆಯನ್ನು ವರದಿಯೊಂದಿಗೆ ಲಗತ್ತಿಸಲಾಗಿದೆ.

‘ಕಾರಾಗೃಹದೊಳಗಿನ ಅಕ್ರಮ ಚಟುವಟಿಕೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಇದರಿಂದ ಕೋಪಗೊಂಡ ಕೆಲವರು, ನನ್ನ ಹೆಸರಿಗೆ ಕಳಂಕ ತರುವ ದುರುದ್ದೇಶದಿಂದ ತಿರುಚಿದ (ಮಾರ್ಪಿಂಗ್) ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ’ ಎಂದು ಶಿವಕುಮಾರ್‌ ಹೇಳಿರುವುದಾಗಿ ಗೊತ್ತಾಗಿದೆ.

ADVERTISEMENT

‘ಒಂದೂವರೆ ವರ್ಷದಿಂದ ಕಾರಾಗೃಹದಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ವಿರುದ್ಧ ಅಪಪ್ರಚಾರ ಮಾಡಲು ಕೆಲವರು ಈ ರೀತಿ ಮಾಡಿದ್ದಾರೆ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊ ನಕಲಿ’ ಎಂದು ಗೃಹ ರಕ್ಷಕಿ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.