ADVERTISEMENT

ಹೈಕೋರ್ಟ್‌ಗೆ ಐಎಎಸ್ ಅಧಿಕಾರಿಗಳ ಪ್ರಕರಣ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 20:14 IST
Last Updated 15 ಏಪ್ರಿಲ್ 2013, 20:14 IST

ಬೆಂಗಳೂರು: ಚುನಾವಣಾ ಆಯೋಗದ ನಿರ್ದೇಶನದ ಅನುಸಾರ ನಡೆದ ಐ.ಎ.ಎಸ್ ಅಧಿಕಾರಿಗಳ ವರ್ಗಾವಣೆ ಪ್ರಕರಣ ಈಗ ಹೈಕೋರ್ಟ್ ಮೆಟ್ಟಿಲೇರಿದೆ. ಎಂಟು ಐ.ಎ.ಎಸ್ ಅಧಿಕಾರಿಗಳನ್ನು ಅವರು ಮಾರ್ಚ್ 27ಕ್ಕಿಂದ ಮೊದಲು ಇದ್ದ ಸ್ಥಾನಗಳಿಗೇ ವರ್ಗಾವಣೆ ಮಾಡುವಂತೆ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿ.ಎ.ಟಿ) ನೀಡಿರುವ ಆದೇಶ ಪ್ರಶ್ನಿಸಿ ಚುನಾವಣಾ ಆಯೋಗ ಸೋಮವಾರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಕುಮಾರ್ ಮತ್ತು ನ್ಯಾಯಮೂರ್ತಿ ಬಿ. ಮನೋಹರ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸಿಎಟಿ ಆದೇಶವನ್ನು ಮಂಗಳವಾರದವರೆಗೆ ಅನುಷ್ಠಾನಕ್ಕೆ ತಾರದಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.
ಐಎಎಸ್ ಅಧಿಕಾರಿಗಳಾದ ಡಾ. ರಾಮೇಗೌಡ, ಬಿ.ಎನ್. ಕೃಷ್ಣಯ್ಯ, ಎನ್. ಪ್ರಕಾಶ್, ಜಿ.ಸಿ. ಪ್ರಕಾಶ್, ಎಫ್.ಆರ್. ಜಮಾದಾರ್, ಎಸ್.ಎನ್. ನಾಗರಾಜು, ವಿ. ಶ್ರೀರಾಮರೆಡ್ಡಿ, ಎನ್. ಜಯರಾಮ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಮಾರ್ಚ್ 27ರಂದು ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಸಿಎಟಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು.  ಇವರೆಲ್ಲರೂ ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಪಡೆದ ಅಧಿಕಾರಿಗಳು.`ಎರಡು ವರ್ಷಗಳ ಅವಧಿ ಪೂರ್ಣಗೊಳಿಸುವ ಮುನ್ನವೇ ನಮ್ಮನ್ನು ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾವಣೆ ಮಾಡಲಾಗಿದೆ. ಇದು ಸರಿಯಲ್ಲ' ಎಂದು ಅಧಿಕಾರಿಗಳು ಅರ್ಜಿಯಲ್ಲಿ ದೂರಿದ್ದರು.

ಈ ವಾದವನ್ನು ವಿಭಾಗೀಯ ನ್ಯಾಯಪೀಠದ ಎದುರು ಅಲ್ಲಗಳೆದ ಕೇಂದ್ರ ಚುನಾವಣಾ ಆಯೋಗದ ಪರ ವಕೀಲ ಕೃಷ್ಣ ದೀಕ್ಷಿತ್, `ಸಾಂವಿಧಾನಿಕ ಸಂಸ್ಥೆಯಾದ ಆಯೋಗವನ್ನು ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಬೇರೊಬ್ಬರ ಅಧೀನದಲ್ಲಿ ಇಡುವುದು ಸರಿಯಲ್ಲ' ಎಂದು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.