ADVERTISEMENT

ಹೈಕೋರ್ಟ್‌ಗೆ ಬಿದರಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರ ಸ್ಥಾನದಿಂದ ತಮ್ಮನ್ನು ವಜಾಗೊಳಿಸಿರುವ ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಬೆಂಗಳೂರು ಘಟಕದ ಆದೇಶವನ್ನು ಪ್ರಶ್ನಿಸಿ ಶಂಕರ ಬಿದರಿ ಸೋಮವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

`ಡಿಜಿಪಿ ಹುದ್ದೆಗೆ ಅರ್ಹ ವ್ಯಕ್ತಿಗಳ ನೇಮಕ ನಡೆಯುವವರೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿಯಾಗಿರುವ ಎ.ಆರ್. ಇನ್ಫೆಂಟ್ ಅವರನ್ನು ತಾತ್ಕಾಲಿಕವಾಗಿ ನೇಮಕ ಮಾಡುವಂತೆ ಇದೇ 17ರಂದು ಸಿಎಟಿ ಆದೇಶ ಹೊರಡಿಸಿದೆ. ಇದರ ರದ್ದತಿಗೆ ಬಿದರಿ ಕೋರಿದ್ದಾರೆ.

ಈ ರೀತಿ ಆದೇಶ ಹೊರಡಿಸುವ ಅಧಿಕಾರ ಸಿಎಟಿಗೆ ಇಲ್ಲ. ಈ ಹುದ್ದೆಗೆ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ನ್ಯಾಯಮಂಡಳಿ ತನ್ನ ವ್ಯಾಪ್ತಿ ಮೀರಿ ಆದೇಶ ಹೊರಡಿಸಿದೆ~ ಎನ್ನುವುದು ಅವರ ವಾದ.ಕೇಂದ್ರ ಲೋಕಸೇವಾ ಆಯೋಗಕ್ಕೆ ತಮ್ಮ ಹೆಸರನ್ನು ಶಿಫಾರಸು ಮಾಡುವಾಗ ತಮಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸರ್ಕಾರ ಆಯೋಗದ ಮುಂದೆ ಇಟ್ಟಿತ್ತು. ಯಾವುದೇ ಸತ್ಯಾಂಶವನ್ನು ಮುಚ್ಚಿಡಲಿಲ್ಲ. ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿದ ನಂತರವೇ ಆಯೋಗವು ತಮ್ಮನ್ನು ನೇಮಕ ಮಾಡಿದೆ.

ಆದುದರಿಂದ ಅವರ ನೇಮಕ ಕಾನೂನುಬದ್ಧವಾಗಿಯೇ ನಡೆದಿದೆ. ಅವರ ಕುರಿತಾಗಿ ಆಯೋಗದ ಮುಂದೆ ಸತ್ಯಾಂಶ ಮುಚ್ಚಿಡಲಾಗಿದೆ ಎಂಬ ವಾದದಲ್ಲಿ ಹುರುಳಿಲ್ಲ. ಈ ಹಿನ್ನೆಲೆಯಲ್ಲಿ ಸಿಎಟಿ ಆದೇಶಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಸಿಎಟಿ ಆದೇಶವನ್ನು ಪ್ರಶ್ನಿಸಿ ಈಗಾಗಲೇ ಸರ್ಕಾರ ಕೂಡ ಅರ್ಜಿ ಸಲ್ಲಿಸಿದೆ. ಸಿಎಟಿ ಆದೇಶಕ್ಕೆ ತಡೆ ನೀಡಿರುವ ಹೈಕೋರ್ಟ್, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.