ADVERTISEMENT

ಹೊಸಕೋಟೆ ಉಪನಗರವಾಗಿ ಅಭಿವೃದ್ಧಿ- ಕೇಂದ್ರ ಸರ್ಕಾರ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ಹೊಸಕೋಟೆ: ರಾಷ್ಟ್ರದ ಏಳು ಪಟ್ಟಣಗಳ ಪೈಕಿ ಹೊಸಕೋಟೆ ಪಟ್ಟಣವನ್ನು `ಉಪನಗರ~ವನ್ನಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಸಚಿವ ಬಿ.ಎನ್.ಬಚ್ಚೇಗೌಡ ತಿಳಿಸಿದರು.

ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆ ಅಡಿ ಸುಮಾರು 4.10 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

`ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಸಹ ನಿರ್ಮಾಣ ಮಾಡಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ 30 ಕೋಟಿ ಮತ್ತು ರಾಜ್ಯ ಸರ್ಕಾರ 5 ಕೋಟಿ ರೂಪಾಯಿ ನೀಡಲಿವೆ. ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ರಾಜ್ಯ ಸರ್ಕಾರ ಕೊಳವೆ ಬಾವಿ ಕೊರೆಸಲು 25 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದೆ.

ಇದರಲ್ಲಿ 5 ಕೊಳವೆ ಬಾವಿಗಳನ್ನು ಕೆರೆ ಅಂಗಳದಲ್ಲಿ ಇನ್ನು 5 ಕೊಳವೆ ಬಾವಿಗಳನ್ನು ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಕೊರೆಸಲಾಗುವುದು~ ಎಂದು ತಿಳಿಸಿದರು.

ಐಡಿಎಸ್‌ಎಂಟಿ ಯೋಜನೆ ಅಡಿ 78 ಲಕ್ಷ ರೂಪಾಯಿ ವೆಚ್ಚದಲ್ಲಿ ಪುರಸಭೆ ಕಚೇರಿ ಮುಂಭಾಗ ಅಂಗಡಿ ಮಳಿಗೆ, ರಾಜ್ಯ ಹಣಕಾಸು ಯೋಜನೆ ಅಡಿ 23 ವಾರ್ಡ್‌ಗಳಲ್ಲಿ 250 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ, 13ನೇ ಹಣಕಾಸು ಯೋಜನೆ ಅಡಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ರಾಮಕೃಷ್ಣ ರಸ್ತೆ ಡಾಂಬರೀಕರಣ, ಪುರಸಭೆ ನಿಧಿಯಲ್ಲಿ 57 ಲಕ್ಷ ರೂಪಾಯಿ ವೆಚ್ಚದಲ್ಲಿ ವಿಶ್ವೇಶ್ವರಯ್ಯ ಬಡಾವಣೆಯಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.

ಪುರಸಭೆ ಅಧ್ಯಕ್ಷ ಸಿ.ರಾಜಣ್ಣ, ಮುಖ್ಯಾಧಿಕಾರಿ ಎಸ್.ಎ.ರಾಮಪ್ರಕಾಶ್, ಎಪಿಎಂಸಿ ಅಧ್ಯಕ್ಷ ಸಿ.ಮುನಿಯಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿ.ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಹಣ್ಣು ವಿತರಣೆ
ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 105ನೇ ಜನ್ಮ ದಿನಾಚರಣೆ ಅಂಗವಾಗಿ ಡಾ. ಜಗಜೀವನ ರಾಮ್ ಹೋರಾಟ ವೇದಿಕೆ ಆಶ್ರಯದಲ್ಲಿ ಇಲ್ಲಿನ ಎಂವಿಜೆ ಆಸ್ಪತ್ರೆಯ ರೋಗಿಗಳಿಗೆ ಗುರುವಾರ ಹಣ್ಣು ವಿತರಿಸಲಾಯಿತು.

ರಾಜ್ಯ ಘಟಕದ ಅಧ್ಯಕ್ಷ ಜೆ.ಎಂ.ದೇವರಾಜ್, ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕುಮಾರ್, ತಾಲ್ಲೂಕು ಅಧ್ಯಕ್ಷ ಶಿವಾನಂದ, ಪುರಸಭೆ ಸದಸ್ಯ ಎಂ.ರವಿ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.