ADVERTISEMENT

ಹೊಸ ಗೆಟಪ್‌ನಲ್ಲಿ ಬಿಎಂಟಿಸಿ ನೌಕರರು

ವಿಜಯಕುಮಾರ್ ಸಿಗರನಹಳ್ಳಿ
Published 3 ಡಿಸೆಂಬರ್ 2017, 19:37 IST
Last Updated 3 ಡಿಸೆಂಬರ್ 2017, 19:37 IST
ಹೊಸ ಗೆಟಪ್‌ನಲ್ಲಿ ಬಿಎಂಟಿಸಿ ನೌಕರರು
ಹೊಸ ಗೆಟಪ್‌ನಲ್ಲಿ ಬಿಎಂಟಿಸಿ ನೌಕರರು   

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಚಾಲಕ ಮತ್ತು ನಿರ್ವಾಹಕರು ಇನ್ನು ಮುಂದೆ ಶೂ, ಬೆಲ್ಟ್ ಮತ್ತು ಟೋಪಿಯೊಂದಿಗೆ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಗರದಲ್ಲಿ ಖಾಸಗಿ ವಾಹನಗಳ ಸಂಚಾರ ಕಡಿಮೆ ಮಾಡಿ ಸಮೂಹ ಪ್ರಯಾಣಕ್ಕೆ ಜನರನ್ನು ಆಕರ್ಷಿಸಲು ಉದ್ದೇಶಿಸಿರುವ ಬಿಎಂಟಿಸಿ ಅಧಿಕಾರಿ
ಗಳು, ಚಾಲಕ ಮತ್ತು ನಿರ್ವಾಹಕರಲ್ಲಿ ಶಿಸ್ತು ಮೈಗೂಡಿಸಲು ಮುಂದಾಗಿದ್ದಾರೆ.

‘ಪ್ರತಿನಿತ್ಯ ಶೇವ್ ಮಾಡಬೇಕು, ಖಾಕಿ ಸಮವಸ್ತ್ರ ಧರಿಸಬೇಕು, ಇನ್‌ಶರ್ಟ್ ಮಾಡಬೇಕು, ಪ್ಯಾಂಟ್‌ಗೆ ಬೆಲ್ಟ್ ಹಾಕಿಕೊಳ್ಳಬೇಕು. ಕಾಲಿಗೆ ಶೂ ಇರಬೇಕು, ಶರ್ಟ್‌ ಜೇಬಿಗೆ ನಾಮಫಲಕ ಹಾಕಿಕೊಳ್ಳುವುದು ಕಡ್ಡಾಯ’ ಎಂಬ ಸುತ್ತೋಲೆಯನ್ನು ಎಲ್ಲಾ ಡಿಪೋಗಳ ಸೂಚನಾ ಫಲಕಗಳಲ್ಲಿ ಅಂಟಿಸಲಾಗಿದೆ.

ADVERTISEMENT

‘ಪ್ರಯಾಣಿಕರನ್ನು ಸಾರಿಗೆ ಸಂಸ್ಥೆ ಬಸ್‌ಗಳಿಗೆ ಆಕರ್ಷಿಸುವ ಸಲುವಾಗಿ ಸ್ವಚ್ಛತೆಗೆ ಸಂಸ್ಥೆ ಆದ್ಯತೆ ನೀಡಿದೆ. ಶಿಸ್ತು ಕಾಪಾಡಿಕೊಳ್ಳುವ ಜೊತೆ ಸ್ವಚ್ಛವಾಗಿರುವಂತೆ ಚಾಲಕ ಮತ್ತು ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಮವಸ್ತ್ರದ ಜೊತೆಗೆ ಶೋ, ಬೆಲ್ಟ್ ಧರಿಸಬೇಕು ಎಂಬುದು ಹಳೇ ನಿಯಮ. ಇದಕ್ಕಾಗಿ ನೌಕರರಿಗೆ ಭತ್ಯೆ ಕೂಡ ನೀಡಲಾಗುತ್ತಿದೆ. ಆದರೂ, ಯಾರೂ ಪಾಲಿಸುತ್ತಿಲ್ಲ. ಹೀಗಾಗಿ ಮತ್ತೊಮ್ಮೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.‌

‘ಪ್ರಯಾಣಿಕರೊಂದಿಗೆ ಸ್ನೇಹಮಯವಾಗಿ ನಡೆದುಕೊಳ್ಳಲು ಸೂಚನೆ ನೀಡಲಾಗಿದೆ. ದುರ್ನಡತೆ ತೋರಿದವರ ವಿರುದ್ಧ ದೂರು ನೀಡಲು ಪ್ರಯಾಣಿಕರಿಗೆ ಅನುಕೂಲ ಆಗುವಂತೆ ನಾಮಫಲಕ ಹಾಕಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ’ ಎಂದು ತಿಳಿಸಿದರು.

ನೌಕರರ ಅಸಮಾಧಾನ:‘ಶೂ ಮತ್ತು ಬೆಲ್ಟ್ ಧರಿಸಿ ಶುಭ್ರವಾಗಿ ಇರಬೇಕು ಎಂಬ ಸಂಸ್ಥೆಯ ನಿಯಮ ಪಾಲಿಸಲು ಅಭ್ಯಂತರ ಇಲ್ಲ. ಆದರೆ, ವರ್ಷಕ್ಕೆ ₹ 600 ಮಾತ್ರ ಭತ್ಯೆ ನೀಡುತ್ತಿರುವುದಕ್ಕೆ ಆಕ್ಷೇಪ ಇದೆ’ ಎಂದು ನೌಕರರೊಬ್ಬರು ತಿಳಿಸಿದರು.

‘ವರ್ಷಕ್ಕೆ ಎರಡು ಜೊತೆ ಖಾಕಿ ಸಮವಸ್ತ್ರಕ್ಕೆ ಬೇಕಾಗುವಷ್ಟು ಬಟ್ಟೆಯನ್ನು ಸಂಸ್ಥೆಯಿಂದ ನೀಡಲಾಗುತ್ತದೆ. ಅವು ಕೂಡ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿರುತ್ತವೆ. ವರ್ಷಕ್ಕೊಮ್ಮೆ ನೀಡುವ ₹ 600 ಭತ್ಯೆಯಲ್ಲೆ ಹೊಲಿಸಿಕೊಳ್ಳಬೇಕು. ಈ ಹಣ ಹೆಚ್ಚಿಸಬೇಕು, ಗುಣಮಟ್ಟದ ಬಟ್ಟೆ ನೀಡಬೇಕು’ ಎಂದೂ ನೌಕರರು ಒತ್ತಾಯಿಸಿದರು.

ಊಟ, ತಿಂಡಿ ಕೇಳುವಂತಿಲ್ಲ

‘ಬಸ್‌ ಚಾಲಕರು ನಿರ್ವಾಹಕರಿಂದ ಊಟ, ತಿಂಡಿ ಮತ್ತು ಕಾಫಿ–ಟೀ ಕೊಡಿಸುವಂತೆ ಕೇಳಬಾರದು‘ ಎಂದೂ ಸೂಚನೆ ನೀಡಲಾಗಿದೆ. ‘ನಿಮ್ಮ ಊಟ, ತಿಂಡಿ ವೆಚ್ಚವನ್ನು ನೀವೇ ಭರಿಸಿಕೊಳ್ಳಬೇಕು. ನಿರ್ವಾಹಕರ ಮೇಲೆ ಒತ್ತಡ ಹೇರುವುದು ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಲಾಗಿದೆ. ಈ ಆದೇಶದ ಪ್ರತಿಗಳನ್ನೂ ಡಿಪೋಗಳ ಸೂಚನಾ ಫಲಕಗಳಲ್ಲಿ ಅಂಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.