
ಬೆಂಗಳೂರು: ‘ಮಾತೃ ಭಾಷೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅಸಮರ್ಪಕವಾಗಿದ್ದು, ಮಾತೃ ಭಾಷೆಯ ಉಳಿವಿಗಾಗಿ ಸಂವಿಧಾನದ ಬದಲಾವಣೆಗೆ ಎಲ್ಲಾ ಪ್ರಾದೇಶಿಕ ಭಾಷಿಕರು ಸಂಘಟಿತರಾಗಿ ಹೋರಾಡಬೇಕು’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರ 48ನೇ ಜನ್ಮದಿನ ಪ್ರಯುಕ್ತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
‘ಸುಪ್ರೀಂ ಕೋರ್ಟ್ ಕನ್ನಡ ಭಾಷಾ ಮಾಧ್ಯಮದ ಕುರಿತು ಹೇಳಿರುವುದು ಕೇವಲ ಕನ್ನಡ ಭಾಷೆಗೆ ಮಾತ್ರ ಸೀಮಿತವಾದುದಲ್ಲ. ದೇಶದ ಇತರೆ ಪ್ರಾದೇಶಿಕ ಭಾಷೆಗಳಿಗೂ ಇದು ಅನ್ವಯವಾಗುತ್ತದೆ. ಹೀಗಾಗಿ ಬೇರೆ ಎಲ್ಲ ಭಾಷೆಗಳೂ ಈ ಹೋರಾಟಕ್ಕೆ ಕೈ ಜೋಡಿಸಬೇಕು’ ಎಂದರು.
‘ಎಲ್ಲ ಭಾಷೆಗಳ ಬಗೆಗೂ ಗೌರವ ಇರಬೇಕು. ಆದರೆ, ಮಾತೃಭಾಷೆಯ ಕುರಿತು ಹೆಚ್ಚಿನ ಪ್ರೀತಿ ಹಾಗೂ ಗೌರವವನ್ನು ಹೊಂದುವುದು ಎಲ್ಲರ ಕರ್ತವ್ಯವಾಗಿದೆ’ ಎಂದು ಹೇಳಿದರು.ಸಾಹಿತಿ ಚಂದ್ರಶೇಖರ ಕಂಬಾರ, ‘ಕನ್ನಡ ಭಾಷೆಯ ಏಳಿಗೆಗಾಗಿ ಚಳವಳಿಯನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ. ಕನ್ನಡ ಭಾಷೆಯ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಆಘಾತಕಾರಿಯಾಗಿದೆ. ಹೀಗಾಗಿ, ಎಲ್ಲರೂ ಸಂಘಟನೆಗೊಂಡು ಹೋರಾಡಬೇಕಿದೆ’ ಎಂದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ‘ಕನ್ನಡ ಭಾಷೆಗೆ ಯಾವುದೇ ಕುತ್ತು ಬಂದರೂ ಹೋರಾಟ ನಡೆಸುವ ಒಂದು ಸಂಘಟನೆಯಿರಲಿಲ್ಲ. ಆದರೆ, ಈಗ ಕರ್ನಾಟಕ ರಕ್ಷಣಾ ವೇದಿಕೆಯು ಸಂಘಟನೆಗೊಂಡು, ಕನ್ನಡ ಭಾಷೆಗಾಗಿ ಹೋರಾಡುತ್ತಿದೆ’ ಎಂದು ಹೇಳಿದರು.
ಮೇಯರ್ ಬಿ.ಎಸ್.ಸತ್ಯನಾರಾಯಣ, ‘ಕನ್ನಡಕ್ಕೆ ಕುತ್ತು ಬಂದಿರುವ ಈ ಸಂದರ್ಭದಲ್ಲಿ ಗೋಕಾಕ್ ಮಾದರಿಯ ಹೋರಾಟ ನಡೆಯಬೇಕು’ ಎಂದರು.‘ಈಗಲೇ ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಕನ್ನಡ ಭಾಷೆಯನ್ನು ವಸ್ತು ಸಂಗ್ರಹಾಲಯದಲ್ಲಿ ನೋಡಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.