ADVERTISEMENT

‘ಕಥೆಯೆಂದರೆ ಸುಳ್ಳು– ಭ್ರಮೆಗಳ ಸಂಗಮ’

​ಪ್ರಜಾವಾಣಿ ವಾರ್ತೆ
Published 10 ಜೂನ್ 2014, 19:30 IST
Last Updated 10 ಜೂನ್ 2014, 19:30 IST

ಬೆಂಗಳೂರು: ‘ದೇಶಿ ಸಂಸ್ಕೃತಿಯನ್ನು ಪೀಳಿಗೆಯಿಂದ ಪೀಳಿಗೆಗೆ ಧಾರೆ ಎರೆಯುವಂತಹ ಕಥೆ ಹೇಳುವ ಹಳೆಯ ಕ್ರಮದಿಂದ ನಾವು ದೂರ ಸರಿದಿದ್ದು, ಪಾಶ್ಚಾತ್ಯ ಪ್ರಭಾವದ ಆಧುನಿಕ ಶೈಲಿಗೆ ಮಾರು ಹೋಗಿದ್ದೇವೆ’ ಎಂದು ಮಲೆಯಾಳಂನ ಹಿರಿಯ ಸಾಹಿತಿ ಸಿ.ರಾಧಾಕೃಷ್ಣನ್‌ ವಿಷಾದಿಸಿದರು.

ಸಾಹಿತ್ಯ ಅಕಾಡೆಮಿ ಮಂಗಳವಾರ ಏರ್ಪಡಿಸಿದ್ದ ‘ದಕ್ಷಿಣ ಭಾರತೀಯ ಸಣ್ಣ ಕಥೆಗಳು: ನೋಟ– ನಿಲುವು’ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪಂಚತಂತ್ರ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಥೆಗಳನ್ನು ಕೇಳಿ ಬೆಳೆದ ಮಕ್ಕಳಿಗೂ ಅದರ ಸೋಂಕಿ­ಲ್ಲದೆ ಬೆಳೆದ ಮಕ್ಕಳಿಗೂ ಅಪಾರ ವ್ಯತ್ಯಾಸ­ವಿದೆ. ನಮ್ಮ ಹಳೆಯ ಕಥೆಗಳು ಕೇಳುಗರಲ್ಲಿ ಅವರಿಗೆ ಅರಿವಿಲ್ಲದಂತೆ ಈ ನೆಲದ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಬೆಳೆಸುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ದೇಶ– ಕಾಲವನ್ನು ಮೀರುವ ಗುಣ ಹೊಂದಿದ ಕಥೆ ಮಾತ್ರ ಜಗತ್ತಿನ ಎತ್ತರಕ್ಕೆ ಬೆಳೆದು ಬಹುಕಾಲ ಬಾಳುತ್ತದೆ. ಇಲ್ಲದಿದ್ದರೆ ಹುಟ್ಟಿದ ಜಾಗದಲ್ಲೇ ಮಣ್ಣಾಗುತ್ತದೆ’ ಎಂದು ಸೂಚ್ಯವಾಗಿ ತಿಳಿಸಿದರು.

‘ಮಲೆಯಾಳಂ ಭಾಷೆಯಲ್ಲಿ ಈಗೀಗ ಮತ್ತೆ ಹಳೆ ಕಥನ ಕ್ರಮದತ್ತ ಮುಖ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ರಾಮಾಯಣ, ಮಹಾ­ಭಾರತ ಶೈಲಿಯ ಕಥೆಗಳೂ ಹುಟ್ಟುತ್ತಿವೆ. ಇದೊಂದು ಧನಾತ್ಮಕ ಬೆಳವಣಿಗೆ’ ಎಂದು ಪ್ರತಿಪಾದಿಸಿದರು.

‘ಕಥೆಗಳಿಗೆ ವಾಸ್ತವಿಕ ಸಂಗತಿಗಳಷ್ಟೇ ಆಧಾರ ಆಗಬೇಕಿಲ್ಲ. ಹಾಗೊಂದು ವೇಳೆ ಘಟನಾವಳಿಗಳ ಮೇಲೆ ಕಥೆ ಹೆಣೆಯುವುದಾದರೆ ಅದು ಚರಿತ್ರೆಯೇ ಆಗಿಬಿಡುತ್ತದೆ. ಸತ್ಯ, ಸುಳ್ಳು, ಭ್ರಮೆ ಎಲ್ಲವನ್ನೂ ಒಳಗೊಂಡಿರುವ ಸಾಹಿತ್ಯ ಪ್ರಕಾರವೇ ಕಥೆ. ಚೋದ್ಯ­ವೆಂದರೆ ಸುಳ್ಳು ಸಂಗತಿಗಳಿಂದಲೇ ರೂಪು­ಗೊಂಡ ಕಥೆ ಕೊನೆಗೆ ಸತ್ಯ, ಪ್ರಾಮಾಣಿಕತೆಗಳನ್ನೇ ಪ್ರತಿಪಾದಿಸುತ್ತದೆ’ ಎಂದು ವಿಶ್ಲೇಷಿಸಿದರು.

‘ಕಥೆ ಹೇಳುವವರು ಎಂದರೆ ಸುಳ್ಳುಗಾರರು’ ಎಂದು ಚಟಾಕಿ ಹಾರಿಸಿದ ರಾಧಾಕೃಷ್ಣನ್‌, ತಮ್ಮ ಈ ಹೇಳಿಕೆಗೆ ಪೂರಕವಾಗಿ ತಮ್ಮದೇ ಒಂದು ತಮಾಷೆ ಪ್ರಸಂಗವನ್ನೂ ನೆನಪು ಮಾಡಿಕೊಂಡರು.

‘ನೀನು ಮದುವೆ ಆಗುತ್ತಿರುವುದು ಒಬ್ಬ ಕಥೆಗಾರನನ್ನು. ಅಂದರೆ ಸುಳ್ಳು ಹೇಳುವವನನ್ನು. ಆತನ ಮಾತಿನಲ್ಲಿ ಯಾವುದನ್ನು ನಂಬಬೇಕು; ಯಾವುದನ್ನು ಬಿಡಬೇಕು ಎನ್ನುವುದನ್ನು ಯೋಚಿಸಿ ನಿರ್ಧರಿಸು’ ಎಂದು ನನ್ನ ಭಾವಿಪತ್ನಿಗೆ ಅವರ ಚಿಕ್ಕಪ್ಪ ಸಲಹೆ ನೀಡಿದ್ದರು. ಹೀಗಾಗಿ ಮದುವೆ­ಯಾದ ಬಳಿಕ ಆಕೆ ನನ್ನ ಪ್ರತಿ ಮಾತನ್ನೂ ಅದು ನಿಜವೋ, ಸುಳ್ಳೋ ಎಂಬ ಪರೀಕ್ಷಾ ದೃಷ್ಟಿಯಿಂದ ನೋಡುತ್ತಿದ್ದಳು’ ಎಂದು ಹೇಳಿದರು.

‘ಮಹಾಭಾರತದ ಕಥೆಯನ್ನು ಕೇಳಿದಾಗ ಅಂತಹ ಘಟನೆ ನಡೆದಿದೆ ಎಂಬುದನ್ನು ನಂಬಲು ಸಾಧ್ಯವೇ ಇಲ್ಲ. ಈ ಮಹಾಕಾವ್ಯದ ಒಂದೊಂದು ಪಾತ್ರದ ಹುಟ್ಟೂ ಒಂದೊಂದು ವಿಚಿತ್ರ ರೀತಿಯಲ್ಲಿ ಆಗಿದೆ. ಉದಾಹರಣೆಗೆ ಪಾಂಚಾಲಿ ಬೆಂಕಿಯಿಂದ ಜನಿಸುತ್ತಾಳೆ. ಹಾಗೆಯೇ ಕರ್ಣ ಸೂರ್ಯನಿಂದ ಹುಟ್ಟುತ್ತಾನೆ.

ಆದರೆ, ಈ ಮಹಾಕಾವ್ಯದ ಪ್ರತಿ­ಯೊಂದು ಪಾತ್ರವೂ ಅರುಹುವ ನೀತಿಗಳು ಮಾತ್ರ ಅನನ್ಯ’ ಎಂದು ಅವರು ಕೊಂಡಾಡಿದರು. ‘ವ್ಯಾಸ ಮಹರ್ಷಿ ಭಾಗವತದ ಕೊನೆಯಲ್ಲಿ ತನ್ನ ಮಹಾ­ಕಾವ್ಯ ಕಾಲ್ಪನಿಕ ಸನ್ನಿವೇಶಗಳ ಸೃಷ್ಟಿಯಾ­ಗಿದೆ ಎಂಬು­ದನ್ನು ಒಪ್ಪಿಕೊಂಡಿದ್ದಾನೆ’ ಎಂದೂ ತಿಳಿಸಿದರು.

ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ‘ಒಂದಾ­ನೊಂದು ಕಾಲದಲ್ಲಿ, ಒಂದಾನೊಂದು ಊರಿನಲ್ಲಿ ಎಂಬ ಒಂದೇ ಒಂದು ಪದ, ಕಥೆಯನ್ನು ನಿನ್ನೆ­ಯಿಂದ ಅನಂತದವರೆಗೆ ವಿಸ್ತರಣೆ ಮಾಡಿ­ಬಿಡುತ್ತದೆ’ ಎಂದು ವ್ಯಾಖ್ಯಾನಿಸಿದರು.

‘ಭಾರತದ ಎಲ್ಲ ಭಾಷೆಗಳಲ್ಲೂ ಕಥನ ಕೌಶಲ ಹೊಸ ದಿಕ್ಕನ್ನು ಪಡೆದುಕೊಂಡಿದ್ದು, ಹಲವು ಪರಿ­ವರ್ತ­ನೆಗಳನ್ನು ಕಂಡಿದೆ’ ಎಂದ ಅವರು, ‘ನಮ್ಮ ಕಥಾ ಪ್ರಕಾರವನ್ನೂ ಇಂಗ್ಲಿಷ್‌ ಪ್ರಭಾವ ಆವರಿಸಿದೆ’ ಎಂದು ಹೇಳಿದರು.

ಕಥೆಗಾರ ಕೆ.ಸತ್ಯನಾರಾಯಣ ‘ಮಯೂರ’ ದಲ್ಲಿ ಪ್ರಕಟವಾಗಿದ್ದ ತಮ್ಮ ‘ವೈದ್ಯನ ಹುಚ್ಚು ಮಗ (ಡಾಕ್ಟರ್ ಮ್ಯಾಡ್‌ ಚೈಲ್ಡ್‌)’ ಕಥೆ ವಾಚಿಸಿದರು. ಎಸ್‌.ಆರ್‌. ವಿಜಯಶಂಕರ್‌ ಸಮಕಾಲೀನ ಕನ್ನಡ ಸಣ್ಣಕಥೆಗಳ ಕುರಿತು ಪ್ರಬಂಧ ಮಂಡಿಸಿದರು.  ಮಲೆಯಾಳಂ, ತಮಿಳು ಮತ್ತು ತೆಲುಗು ಕಥೆಗಳ ಬಗೆಗೂ ಗೋಷ್ಠಿಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.