ಬೆಂಗಳೂರು: ‘ಎಂಟು ವರ್ಷಗಳಿಂದ ಉತ್ತಮ ಸ್ನೇಹಿತೆಯಾಗಿದ್ದ ಸುನೀತಾ, ಕಾರಣ ಹೇಳದೆ ಏಕಾಏಕಿ ದೂರವಾದಳು. ಆಕೆಯ ಈ ನಿರ್ಧಾರ ಬೇಸರ ಉಂಟು ಮಾಡಿತು. ಹೀಗಾಗಿ ಕೋಪದ ಭರದಲ್ಲಿ ಕೊಲೆ ಮಾಡಿದೆ’ ಎಂದು ಆರೋಪಿ ಧನರಾಜ್ ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾನೆ.
ಬೆಂಗಳೂರು ಟರ್ಫ್ ಕ್ಲಬ್ ಎದುರು ಗುರುವಾರ ಹಾಡಹಗಲೇ ಸುನೀತಾ ಅವರಿಗೆ 12 ಬಾರಿ ಚಾಕುವಿನಿಂದ ಇರಿದು ಕೊಂದ ಧನರಾಜ್‌ನನ್ನು, ಶುಕ್ರವಾರ ನಗರದ ಎರಡನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು 24 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದರು ಎಂದು ಪೊಲೀಸರು ಹೇಳಿದ್ದಾರೆ.
‘2006ರಲ್ಲಿ ಗಣೇಶ ಹಬ್ಬದ ದಿನದಂದು ಕೆಂಪೇಗೌಡನಗರದಲ್ಲಿ ಆರ್ಕೇಸ್ಟ್ರಾ ನಡೆಯುತ್ತಿತ್ತು. ಈ ಕಾರ್ಯಕ್ರಮದ ವೀಕ್ಷಣೆಗೆ ಸುನೀತಾ, ಆಕೆಯ ಪತಿ ಕುಮಾರ್ ಮತ್ತು ಕುಟುಂಬ ಸದಸ್ಯರು ಬಂದಿದ್ದರು. ಈ ವೇಳೆ ಆಕಸ್ಮಿಕವಾಗಿ ಸುನೀತಾಳ ಭೇಟಿಯಾಯಿತು. ಇಬ್ಬರೂ ಒಂದೇ ಊರಿನವರಾದ ಕಾರಣ ಕೆಲ ಕಾಲ ಮಾತನಾಡಿದೆವು. ನಂತರ ಆಕೆ ತನ್ನ ಕುಟುಂಬ ಸದಸ್ಯರನ್ನೂ ಪರಿಚಯ ಮಾಡಿಕೊಟ್ಟಳು. ಕಾಲ ಕ್ರಮೇಣ ಅವರ ಕುಟುಂಬಕ್ಕೂ ಹೆಚ್ಚು ಆಪ್ತನಾದೆ’ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ.
ನಂತರದ ದಿನಗಳಲ್ಲಿ ಸುನೀತಾಳನ್ನು ನಾನೇ ಕೆಲಸಕ್ಕೆ ಡ್ರಾಪ್ ಮಾಡುತ್ತಿದ್ದೆ. ಆದರೆ, ಎರಡು ತಿಂಗಳಿನಿಂದ ಆಕೆ ನನ್ನೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಉತ್ತರವಿರಲಿಲ್ಲ. ಈ ವರ್ತನೆಗೆ ಕಾರಣ ತಿಳಿಸುವಂತೆ ಕಳೆದ ತಿಂಗಳು ಆಕೆಯ ಮೊಬೈಲ್‌ಗೆ ಸಂದೇಶ ರವಾನಿಸಿದ್ದೆ. ಆದರೆ, ಆಕೆ ಅದಕ್ಕೂ ಪ್ರತಿಕ್ರಿಯಿಸಿರಲಿಲ್ಲ.
ಹೀಗಾಗಿ ಭಯಪಡಿಸುವ ಉದ್ದೇಶದಿಂದ ಗುರುವಾರ ಮಧ್ಯಾಹ್ನ ಚಾಕುವಿನೊಂದಿಗೆ ಸುನೀತಾ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿದ್ದೆ. ಆದರೆ, ಜಗಳ ವಿಕೋಪಕ್ಕೆ ತಿರುಗಿದಾಗ ಚಾಕುವಿನಿಂದ ಇರಿದೆ ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದರು.
‘ಸುನೀತಾ, ಧನರಾಜ್ ಜತೆ ಹೆಚ್ಚು ಸಲುಗೆಯಿಂದ ಇದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಆತನ ವರ್ತನೆ ಸುನೀತಾ ಕುಟುಂಬ ಸದಸ್ಯರಿಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಆತನಿಂದ ದೂರವಾಗುವಂತೆ ಸುನೀತಾಗೆ ತಂದೆ ಸಣ್ಣೇಗೌಡ ಬುದ್ದಿಮಾತು ಹೇಳಿದ್ದರು. ತಂದೆಯ ಮಾತಿನಂತೆ ಅವರು ಆರೋಪಿಯಿಂದ ದೂರವಾಗಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.