ADVERTISEMENT

‘ಕ್ರೀಡೆಯನ್ನು ಪ್ರೀತಿಸುವ ಮನೋಭಾವ ಅಗತ್ಯ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 19:57 IST
Last Updated 24 ಸೆಪ್ಟೆಂಬರ್ 2013, 19:57 IST

ಬೆಂಗಳೂರು: ‘ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಕ್ರೀಡೆಯನ್ನು ಸ್ವೀಕರಿಸಬೇಕು. ಕ್ರೀಡೆಯಲ್ಲಿ ಯಾವುದೇ ವೈಯಕ್ತಿಕ ಭಾವನೆಗೆ ಅವಕಾಶ ನೀಡಬಾರದು’ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ  ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬೆಟ್ಟಸ್ವಾಮಿ ಹೇಳಿದರು. 

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್‌ ಬೆಂಗಳೂರು ನಗರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರವು ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಹಾಗೂ ಮಹಿಳಾ (ಪೈಕಾ) ಕ್ರೀಡಾಕೂಟ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ರೀಡೆಯು ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯವಾಗುತ್ತದೆ. ಕ್ರೀಡೆಯನ್ನು ಎಲ್ಲರೂ ಪ್ರೀತಿಸಬೇಕು. ಅದರ ಬೆಳವಣಿಗೆಗೆ ಗಮನ ನೀಡಬೇಕು’ ಎಂದರು.

‘ಬೆಂಗಳೂರು ನಗರ ವಿಭಾಗ ಮಟ್ಟದಲ್ಲಿ ನಡೆಯುವ ಕ್ರೀಡೆಗಳಲ್ಲಿ ಜಯಿಸಿದ ತಂಡಗಳು ಮೈಸೂರಿನಲ್ಲಿ ನಡೆಯಲಿರುವ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ’ ಎಂದು ಜೂಡೋ ತರಬೇತುದಾರ ಎನ್‌.ಪ್ರಕಾಶ್‌ ತಿಳಿಸಿದರು.

ಎರಡು ದಿನ ನಡೆಯಲಿರುವ ಕ್ರೀಡಾಕೂಟದಲ್ಲಿ ಓಟ, ಶಾಟ್‌ಪುಟ್‌, ಎತ್ತರ ಜಿಗಿತ, ಉದ್ದ ಜಿಗಿತ, ಖೊಖೊ, ಕಬಡ್ಡಿ, ವಾಲಿಬಾಲ್‌  ಇನ್ನು ಮುಂತಾದ ಬಗೆಯ ಕ್ರೀಡೆಗಳು ನಡೆಯಲಿವೆ ಎಂದರು.

ಬಾರದ ಸಚಿವರು
ಆಮಂತ್ರಣ ಪತ್ರಿಕೆಯಲ್ಲಿ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಆರ್‌.ರೋಷನ್‌ ಬೇಗ್‌, ಕೇಂದ್ರ ಸಚಿವ ವೀರಪ್ಪ ಮೊಯಿಲಿ, ಗೃಹ ಸಚಿವ ದಿನೇಶ್‌ ಗುಂಡೂರಾವ್‌ ಹೀಗೆ ಇನ್ನೂ ಅನೇಕರ ಹೆಸರಿತ್ತು. ಆದರೆ, ಯಾವ ಸಚಿವರೂ ಕ್ರೀಡಾಕೂಟದ ಉದ್ಘಾಟನೆಗೆ ಬಂದಿರಲಿಲ್ಲ..ಯಾವ ಸಚಿವರೂ ಬರದೆ ಇದ್ದುದಕ್ಕೆ ಭಾಗವಹಿಸಿದ್ದ ಕ್ರೀಡಾಳುಗಳ ಮುಖದಲ್ಲಿ ಬೇಸರ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.