ADVERTISEMENT

‘ಡಿಜಿಟಲ್‌ ಗ್ರಂಥಾಲಯದ ಮಾಹಿತಿ ವಿಶ್ವಾಸಾರ್ಹ’

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST

ಬೆಂಗಳೂರು: ‘ಡಿಜಿಟಲ್‌ ಗ್ರಂಥಾಲಯದಲ್ಲಿರುವ ಮಾಹಿತಿಗೆ ಅಧಿಕೃತ ಮಾನ್ಯತೆ ಇರುತ್ತದೆ. ಅಲ್ಲಿನ ಮಾಹಿತಿ ವಿಶ್ವಾಸಾರ್ಹವೂ ಆಗಿದೆ’ ಎಂದು ಗ್ರಾಮೀಣ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.

ಇಂಟರ್‌ನ್ಯಾಷನಲ್‌ ಸ್ಕೂಲ್‌ ಆಫ್‌ ಇನ್‌ಫಾರ್ಮೇಷನ್‌ ಮ್ಯಾನೇಜ್‌ಮೆಂಟ್‌  (ಐಎಸ್‌ಐಎಂ) ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಏಷ್ಯಾ–ಪೆಸಿಫಿಕ್‌ ಡಿಜಿಟಲ್‌ ಗ್ರಂಥಾಲಯ ಉದ್ಘಾಟನೆ ಹಾಗೂ ಸಾಮಾಜಿಕ ಜಾಲತಾಣ ಮತ್ತು ಸಮುದಾಯ ಸಂಪರ್ಕ’ ಕುರಿತು ಅಂತರರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗುವ ಮಾಹಿತಿ, ವಿಷಯ, ಅಂಕಿ–ಅಂಶಗಳನ್ನು ನಂಬುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಕಾಡುತ್ತದೆ. ಏಕೆಂದರೆ, ಅಲ್ಲಿನ ಮಾಹಿತಿಗೆ  ಯಾವುದೇ ದೃಢೀಕರಣವಿರುವುದಿಲ್ಲ. ಅದಕ್ಕೆ ಯಾರೂ ಜವಾಬ್ದಾರರು ಇರುವುದಿಲ್ಲ. ಇದರಿಂದ, ಅಲ್ಲಿನ ಮಾಹಿತಿಯನ್ನು ಪೂರ್ಣವಾಗಿ ನಂಬಲು ಕಷ್ಟ’ ಎಂದು ಅವರು ಅಭಿಪ್ರಾಯ ಪಟ್ಟರು.

‘ಡಿಜಿಟಲ್‌ ಗ್ರಂಥಾಲಯವನ್ನು ವಿದ್ವಾಂಸರಿಗೆ ಮಾತ್ರ ಸೀಮಿತವಾಗಿರಿಸದೆ, ಗ್ರಾಮೀಣ ಜನರಿಗೂ ತಲುಪುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.
ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಮಾತನಾಡಿ, ‘ದೇಶದಲ್ಲಿನ ಪ್ರತಿ ವಿಶ್ವವಿದ್ಯಾಲಯಗಳು ತಮ್ಮಲ್ಲಿರುವ ಮಾಹಿತಿ, ಅಂಕಿ, ಅಂಶಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಮತ್ತು ಅಧ್ಯಾಪಕರಲ್ಲಿ ತಿಳಿವಳಿಕೆ ಮಟ್ಟ ಹೆಚ್ಚಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.