ADVERTISEMENT

‘ದ್ರಾವಿಡ ಭಾಷೆಯ ಭಕ್ತಿ ಚಳವಳಿ ಸಾಹಿತ್ಯ ದೇಶದೆಲ್ಲೆಡೆ ಹರಡಲಿ’

​ಪ್ರಜಾವಾಣಿ ವಾರ್ತೆ
Published 6 ಜೂನ್ 2014, 20:06 IST
Last Updated 6 ಜೂನ್ 2014, 20:06 IST

ಬೆಂಗಳೂರು: ‘ದ್ರಾವಿಡ ಭಾಷೆಯ ಭಕ್ತಿ ಚಳವಳಿಯ ಸಾಹಿತ್ಯವನ್ನು ದೇಶದ ಬೇರೆ ಎಲ್ಲ ಭಾಷೆಗಳಿಗೆ ಅನುವಾದಿಸಿ, ದೇಶದೆಲ್ಲೆಡೆ ಹರಡುವ ಅಗತ್ಯವಿದೆ’ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ ಹೇಳಿದರು.

ರಾಜಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದಿವಂಗತ ಶ್ರೀನಿವಾಸ ಹಾವನೂರ ಅವರ ‘ಸಮಗ್ರ ಹರಿದಾಸ ವಾಙ್ಮಯ  ಕೋಶ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಹರಿದಾಸರು ತಮ್ಮ ದಾಸ ಪರಂಪರೆಯ ಕಾಲದಲ್ಲಿ ಶ್ರೀ ಸಾಮಾನ್ಯನಿಗೂ ಅರ್ಥವಾಗುವಂತೆ ಕೀರ್ತನೆಗಳನ್ನು ಹಾಡಿದರು. ಭಕ್ತಿ ಚಳವಳಿಯು ಬಹುಪ್ರಮುಖ ಪಾತ್ರವನ್ನು ವಹಿಸಿದೆ’ ಎಂದರು.

ನಿವೃತ್ತ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ, ‘ಹರಿದಾಸ ಪರಂಪರೆಗೆ ಮಹಾನ್‌ ಕೊಡುಗೆ ನೀಡಿದ ಡಾ.ಶ್ರೀನಿವಾಸ ಹಾವನೂರ ಅವರ ಮಹಾನ್‌ ಕೆಲಸವನ್ನು ಕಡೆಗಣಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತಿ ಹಾವನೂರು ಮಾತನಾಡಿ, ‘ಹರಿದಾಸ ವಾಜ್ಮಯ ಅಮೃತ ಕಳಸವಾಗಿದೆ. ಶ್ರೀ ಸಾಮಾನ್ಯರಿಗೂ ದಕ್ಕಲಿ ಎಂಬ ಉದ್ದೇಶದಿಂದ ಈ ಕೃತಿ ರಚಿಸಿದರು. 2–3 ಬಾರಿ ತೀವ್ರತರವಾಗಿ ಕಾಯಿಲೆಗೆ ಈಡಾದರೂ, ಅವರು ಅಂದುಕೊಂಡಿದ್ದನ್ನು ಸಾಧಿಸಿದರು’ ಎಂದು ನೆನೆದು ಕಣ್ಣೀರಿಟ್ಟರು.

‘ಹರಿದಾಸ ವಾಜ್ಮಯ ಕೋಶ’
2003 ರಲ್ಲಿ ಪ್ರಕಟವಾದ ‘ಸಮಗ್ರ ದಾಸ ಸಾಹಿತ್ಯ’ವು 50 ಸಂಪುಟಗಳನ್ನು ಹೊಂದಿದ್ದು, 146 ಕೀರ್ತನಕಾರರು ರಚಿಸಿದ 15,500 ಕೀರ್ತನೆಗಳನ್ನು ಹೊಂದಿದೆ. ಆದರೆ, ಈ ಮಹಾಭಂಡಾರದಲ್ಲಿ ನಿರ್ದಿಷ್ಟ ವಸ್ತು ವಿಷಯಗಳನ್ನು ಶೋಧಿಸುವುದು ಸುಲಭವಲ್ಲ ಎಂದು ಅರಿತ ಡಾ. ಹಾವನೂರು ಅವರು ಪ್ರಸ್ತುತ ಕೃತಿಯಾದ ‘ಹರಿದಾಸ ವಾಜ್ಮಯ ಕೋಶ’ ವನ್ನು ರಚಿಸಿದರು.

ಇದರಲ್ಲಿ ಹರಿದಾಸರು ಮತ್ತು ಅವರ ಕೀರ್ತನೆಗಳ ಪ್ರಥಮ ಪಂಕ್ತಿಗಳನ್ನು ಅಕಾರಾದಿಯಾಗಿ ಉಲ್ಲೇಖಿಸಿದುದಲ್ಲದೆ, ಕೃತಿಗಳಲ್ಲಿ ಲಭ್ಯವಾಗುವ 840 ನಿರ್ದಿಷ್ಟ ವಿಷಯಗಳನ್ನೂ ಸುಲಭವಾಗಿ ಗುರುತಿಸುವಂತೆ ಕೊಡಲಾಗಿದೆ. ಪ್ರತಿಯೊಂದು ವಿಷಯವನ್ನು ನಿರೂಪಿಸುವ ಎಲ್ಲ ಹಾಡುಗಳನ್ನೂ ಕಂಪ್ಯೂಟರ್‌ ಮೂಲಕ ವಿಶ್ಲೇಷಿಸಿ ಪಟ್ಟಿ ಮಾಡಲಾಗಿದೆ.

ದಾಸ ಸಾಹಿತ್ಯದ ದೃಷ್ಟಿ, ಚಿಂತನೆಗಳ ಅವಲೋಕನವನ್ನೂ ಮಾಡಲಾಗಿದೆ. ದಾಸ ಸಾಹಿತ್ಯದ ಸಾರ ಸಮೀಕ್ಷೆ, ಕಳೆದ 135 ವರ್ಷಗಳಲ್ಲಿ ಪ್ರಕಟವಾದ ವಿಮರ್ಶಾ ಗ್ರಂಥಗಳು ಮತ್ತು ಎಲ್ಲ ಹರಿದಾಸರುಗಳ ಸಂಕ್ಷಿಪ್ತ ಪರಿಚಯವೂ ಇಲ್ಲಿದೆ. ಈ ಕೃತಿಯನ್ನು ಪ್ರಗತಿ ಗ್ರಾಫಿಕ್ಸ್‌ ಹೊರ ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT