ADVERTISEMENT

‘ಪಾರ್ಕಿಂಗ್ ಶುಲ್ಕ’ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 19:46 IST
Last Updated 20 ಸೆಪ್ಟೆಂಬರ್ 2013, 19:46 IST
ವಾಹನ ನಿಲುಗಡೆ ಶುಲ್ಕ ವಿಧಿಸಲು ಮುಂದಾಗಿರುವ ಬಿಬಿಎಂಪಿ ಕ್ರಮವನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಎತ್ತಿನಗಾಡಿ ಸವಾರಿ ಮಾಡಿ ಪ್ರತಿಭಟನೆ ನಡೆಸಿದರು
ವಾಹನ ನಿಲುಗಡೆ ಶುಲ್ಕ ವಿಧಿಸಲು ಮುಂದಾಗಿರುವ ಬಿಬಿಎಂಪಿ ಕ್ರಮವನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಎತ್ತಿನಗಾಡಿ ಸವಾರಿ ಮಾಡಿ ಪ್ರತಿಭಟನೆ ನಡೆಸಿದರು   

ಬೆಂಗಳೂರು: ಅವಧಿಗೆ ಅನುಗುಣವಾಗಿ ವಾಹನ ನಿಲು­ಗಡೆ ಶುಲ್ಕ ವಿಧಿಸಲು ಮುಂದಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕ್ರಮವನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಕಾರ್ಯಕರ್ತರು ನಗರದ  ಕೆಂಪೇಗೌಡ ರಸ್ತೆಯಲ್ಲಿ ಎತ್ತಿನಗಾಡಿ ನಿಲುಗಡೆ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ನಗರದ ಮೈಸೂರು ಬ್ಯಾಂಕ್‌ ವೃತ್ತದಿಂದ ಎತ್ತಿನಗಾಡಿ ಸವಾರಿ ಆರಂಭಿಸಿದ ಕಾರ್ಯಕರ್ತರು, ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಘೋಷಣೆ ಕೂಗಿದರು. ನಂತರ ಕೆ.ಜಿ.ರಸ್ತೆಯಲ್ಲಿ ಗಾಡಿ ನಿಲುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್‌ ನಾಗರಾಜ್‌, ‘ಮನೆಯಿಂದ ವಾಹನಗಳನ್ನು ಹೊರತಂದರೆ ಗಂಟೆ ಗಂಟೆಗೂ ಹಣ ಕಟ್ಟಬೇಕೆಂಬ ಹೊಸ ನಿಯಮವನ್ನು ಪಾಲಿಕೆ ಜಾರಿಗೆ ತಂದಿದೆ. ನಗರದ 85 ಪ್ರಮುಖ ರಸ್ತೆಗಳಲ್ಲಿ ಈ ನಿಯಮ ಕಾರ್ಯರೂಪಕ್ಕೆ ಬರಲಿದೆ. ಇನ್ನು ಮುಂದೆ ದ್ವಿಚಕ್ರ ವಾಹನಕ್ಕೆ ಪ್ರತಿ ಗಂಟೆಗೆ ರೂ.15 ಹಾಗೂ ಕಾರುಗಳಿಗೆ ಪ್ರತಿ ಗಂಟೆಗೆ ರೂ.30 ನಿಲುಗಡೆ ಶುಲ್ಕ ಪಾವತಿಸಬೇಕು. ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ವಾಹನ ಸವಾರರಿಗೆ ಪಾಲಿಕೆ ಗಾಯದ ಮೇಲೆ ಬರೆ ಎಳೆಯುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಚೇರಿಗಳಲ್ಲಿ ಎಂಟು ತಾಸು ಕೆಲಸ ಮಾಡುವ ನೌಕರ, ವಾಹನ ನಿಲುಗಡೆ ಶುಲ್ಕವೆಂದೇ ಪ್ರತಿದಿನ ನೂರಾರು ರೂಪಾಯಿ ಕಟ್ಟಬೇಕಾಗುತ್ತದೆ. ಅಂದರೆ, ಆ ನೌಕರ ಪಡೆಯುವ ಮಾಸಿಕ ವೇತನದಲ್ಲಿ ಮೂರ್ನಾಲ್ಕು ಸಾವಿರ ರೂಪಾಯಿ ನಿಲುಗಡೆ ಶುಲ್ಕಕ್ಕೇ ಮೀಸಲಿಡಬೇಕು. ಇನ್ನುಳಿದ ಹಣದಲ್ಲಿ ಕುಟುಂಬವನ್ನು ಸಾಕಬೇಕು. ಇಷ್ಟೊಂದು ಸಮಸ್ಯೆಗಳಿಂದ ಕೂಡಿರುವ ಈ ಅವೈಜ್ಞಾನಿಕ ನೀತಿಯನ್ನು ಹಿಂಪಡೆಯುವ ಮೂಲಕ ಪಾಲಿಕೆ ಜನಪರವಾಗಿ ವರ್ತಿಸಬೇಕು. ಇಲ್ಲದಿದ್ದರೆ ಹೋರಾಟದ ತೀವ್ರತೆಯನ್ನು ಹೆಚ್ಚಿಸಿ ‘ಬೆಂಗಳೂರು ಬಂದ್‌’ಗೆ ಕರೆ ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.