ಬೆಂಗಳೂರು: ‘ಪ್ರತಿಭೆ, ವಿದ್ವತ್, ದಕ್ಷತೆ ಹಾಗೂ ಪ್ರಾಮಾಣಿಕತೆ ಒಂದು ಕಡೆ ಸೇರುವುದು ಅಪರೂಪ. ಜಿ.ಎಸ್.ಶಿವರುದ್ರಪ್ಪ ಅವರಲ್ಲಿ ಈ ನಾಲ್ಕು ಗುಣಗಳೂ ಇದ್ದವು’ ಎಂದು ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಬಣ್ಣಿಸಿದರು.
ಜಯನಗರದ ವಿಜಯ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆದ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಸಾಹಿತ್ಯವನ್ನು ಕುರಿತ ರಾಜ್ಯ ಮಟ್ಟದ ವಿಚಾರಸಂಕಿರಣ ‘ದೀಪಧಾರಿ’ ಉದ್ಘಾಟಿಸಿ ಅವರು ಮಾತನಾಡಿದರು.
‘ಕುವೆಂಪು ಅವರ ಪ್ರಭಾವಕ್ಕೆ ಒಳಗಾಗಿದ್ದಾಗ ಜಿ.ಎಸ್.ಎಸ್. ಸಂಸ್ಕೃತ ಭೂಯಿಷ್ಟವಾದ ಭಾಷೆ ಬಳಸಿದರು. ಅವರಲ್ಲಿ ಪ್ರಕೃತಿ ಬಗ್ಗೆ ತನ್ಮಯತೆ, ಬೆರಗಿನ ಭಾವ ಇತ್ತು. ನವ್ಯದ ಸಂದರ್ಭದಲ್ಲಿ ಅವರ ಬರವಣಿಗೆ ಶೈಲಿ ಬದಲಾಯಿತು. ಅವರ ಮೇಲೆ ಇಂಗ್ಲಿಷ್ ನವ್ಯ ಕಾವ್ಯದ ಪ್ರಭಾವ ಸಾಕಷ್ಟು ಆಗಿದೆ’ ಎಂದರು.
‘ಬಂಡಾಯ ಸಾಹಿತ್ಯ ಚಳವಳಿಗೂ ಜಿಎಸ್‌ಎಸ್ ಸ್ಪಂದಿಸಿದರು. ಶೋಷಣೆ, ದಬ್ಬಾಳಿಕೆ, ಭ್ರಷ್ಟಾಚಾರದ ವಿರುದ್ಧ ಲೇಖನಗಳನ್ನು ಬರೆದರು. ಬಳಿಕ ಅವರು ಮುಕ್ತ ಛಂದ ಬಿಟ್ಟು ಛಂದೋಬದ್ಧವಾಗಿ ಕಾವ್ಯಗಳನ್ನು ಬರೆದರು’ ಎಂದರು.
‘ಜಿ.ಎಸ್.ಎಸ್ ಹಾಗೂ ಚನ್ನವೀರ ಕಣವಿ ಅವರನ್ನು ಸೇರಿಸಿ ಮಾತನಾಡುವ ಪದ್ಧತಿ ಕನ್ನಡ ವಿಮರ್ಶಾ ಲೋಕದಲ್ಲಿ ಇದೆ. ಇಬ್ಬರ ಕಾವ್ಯ ಪ್ರಕೃತಿ ಭಿನ್ನವಾದುದು ಎಂಬುದನ್ನು ವಿಮರ್ಶಾ ಲೋಕ ಅಷ್ಟಾಗಿ ಗಮನಿಸಿಲ್ಲ. ಕಣವಿ ಅವರ ಕಾವ್ಯದಲ್ಲಿ ಜಾನಪದ, ಆಡು ಮಾತು ಹಾಗೂ ಹಾಸ್ಯ ಗುಣ ಕಾಣಿಸುತ್ತದೆ. ಜಿಎಸ್‌ಎಸ್ ಕಾವ್ಯದಲ್ಲಿ ಜಾನಪದ ಪ್ರಭಾವ ಕಾಣುವುದಿಲ್ಲ. ಅವರದ್ದು ದೇವರನ್ನು ನಿರಾಕರಿಸುವ ಕಾವ್ಯ’ ಎಂದು ಅವರು ತಿಳಿಸಿದರು.
‘ಜಿಎಸ್ಎಸ್ ಅವರನ್ನು ಸಮನ್ವಯ ಕವಿ ಎಂದು ಕರೆಯಲಾಗುತ್ತಿದೆ. ಇದನ್ನು ಬಹಳ ಮಂದಿ ಈಗ ಹೊಗಳಿಕೆ ಮಾತಾಗಿ ಬಳಸುತ್ತಿದ್ದಾರೆ. ವಿಮರ್ಶಕರು ವ್ಯಂಗ್ಯವಾಗಿ, ಉಪೇಕ್ಷೆಯಿಂದ ಸಮನ್ವಯ ಕವಿ ಎಂದು ಹೇಳುತ್ತಿದ್ದರು. ವಾಸ್ತವವೆಂದರೆ, ಎಲ್ಲ ಕವಿಗಳು, ಲೇಖಕರು ಸಮನ್ವಯದ ಹಾದಿಯನ್ನು ಹಿಡಿಯುತ್ತಾರೆ. ಸಮಾಜದಲ್ಲಾಗುವ ಬದಲಾವಣೆಗಳಿಗೆ ಸ್ಪಂದಿಸುತ್ತಾರೆ’ ಎಂದು ಅವರು ಪ್ರತಿಪಾದಿಸಿದರು.
ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಮಾತನಾಡಿ, ‘ಬರಹ, ಓದು, ಅಧ್ಯಯನ, ಸಂಘಟನೆ, ಸಾಂಸ್ಕೃತಿಕ ನಾಯಕತ್ವ ಜಿಎಸ್‌ಎಸ್ ವ್ಯಕ್ತಿತ್ವದ ಪಂಚಮುಖಗಳು. ಅವರು ಪಂಚ ದೀಪ ಸ್ತಂಭ. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ದೀಪಧಾರಿ ಆಗಿದ್ದರು’ ಎಂದು ಬಣ್ಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.