ಬೆಂಗಳೂರು: ಬ್ಯೂಟಿ ಪಾರ್ಲರ್‌ಗೆ ಬರುತ್ತಿದ್ದ ಗ್ರಾಹಕರ ಮನೆಯ ಕೀ ಕದ್ದು, ‘ಫೇಸ್ ವಾಷ್’ ಮಾಡುವಷ್ಟರಲ್ಲಿ ಸಹ ಚರರ ಮೂಲಕ ಅವರ ಮನೆಯಲ್ಲಿ ಕಳವು ಮಾಡಿಸುತ್ತಿದ್ದ ಲತಾ (32) ಚಂದ್ರಾಲೇಔಟ್ ಪೊಲೀಸರ ಅತಿಥಿಯಾಗಿದ್ದಾಳೆ.
ಮೂಲತಃ ಮಾಗಡಿ ತಾಲ್ಲೂಕಿನ ಲತಾ, ಪತಿ–ಮಗಳ ಜತೆ ನಾಲ್ಕು ವರ್ಷ ಗಳಿಂದ ನಾಗರಬಾವಿಯಲ್ಲಿ ನೆಲೆಸಿದ್ದಳು. ಪ್ರಕರಣದ ಸಂಬಂಧ ಆಕೆಯ ಸಹಚರ ರಾದ ಪ್ರಸಾದ್, ಮಂಜೇಗೌಡ ಮತ್ತು ಪ್ರಸನ್ನ ಎಂಬುವರನ್ನು ಸಹ ಬಂಧಿಸಿ, ಒಂದು ಕೆ.ಜಿ.ಚಿನ್ನಾಭರಣ ಮತ್ತು ಎರ ಡೂವರೆ ಕೆ.ಜಿ. ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ರೂ 32 ಲಕ್ಷ ಎಂದು ಪೊಲೀಸರು ಹೇಳಿದ್ದಾರೆ.
ಮನೆ ಸಮೀಪ ಬ್ಯೂಟಿ ಪಾರ್ಲರ್ ಇಟ್ಟುಕೊಂಡಿದ್ದ ಲತಾ, ಒಂದು ವರ್ಷದಿಂದ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಆಕೆಯ ಪತಿ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ನೆಲೆಸಿದ್ದರು. ಆ ನಂತರ ಆಕೆಗೆ ಊರಿನವನೇ ಆದ ಪ್ರಸಾದ್‌ನ ಪರಿಚಯವಾಗಿತ್ತು. ಮೊದಲು ಕಾರು ಚಾಲಕನಾಗಿದ್ದ ಆತ, ಆ ಕೆಲಸ ತೊರೆದು ಲತಾ ಜತೆ ಕಳ್ಳತನ ಕೃತ್ಯಕ್ಕೆ ಇಳಿ ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಫೇಸ್‌ವಾಷ್ ತಂತ್ರ: ಪಾರ್ಲರ್‌ಗೆ ಬರುತ್ತಿದ್ದ ಪರಿಚಿತ ಮಹಿಳೆಯರಿಗೆ ಫೇಸ್‌ವಾಷ್ ಮಾಡಿಸುವಂತೆ ಬಲವಂತ ಮಾಡು ತ್ತಿದ್ದ ಲತಾ, ಮುಖಕ್ಕೆ ಹಲವು ಕ್ರೀಂಗಳನ್ನು ಹಚ್ಚಿ ಕೂರಿಸುತ್ತಿದ್ದಳು. ಅರ್ಧ ತಾಸು ಕಣ್ಣು ಬಿಡದಂತೆ ಗ್ರಾಹಕರಿಗೆ ಹೇಳುತ್ತಿದ್ದ ಆಕೆ, ಈ ಹಂತದಲ್ಲಿ ಅವರ ವ್ಯಾನಿಟಿ ಬ್ಯಾಗ್‌ನಿಂದ ಮನೆಯ ಕೀಯನ್ನು ತೆಗೆದುಕೊಂಡು ಪ್ರಸಾದ್‌ಗೆ ಕೊಡುತ್ತಿದ್ದಳು.
ಆ ಕೀ ತೆಗೆದುಕೊಂಡು ಹೋಗುತ್ತಿದ್ದ ಪ್ರಸಾದ್, ಮಂಜೇಗೌಡ ಮತ್ತು ಪ್ರಸನ್ನನ ಜತೆಗೂಡಿ ಆ ಗ್ರಾಹಕರ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ. ಸಹಚರರು ವಾಪಸ್ ಬರುವವರೆಗೂ ಫೇಸ್‌ವಾಷ್ ಪೂರ್ಣಗೊಳಿಸದ ಲತಾ, ಅವರು ಬಂದ ನಂತರ ಕೀಯನ್ನು ಬ್ಯಾಗ್‌ನಲ್ಲಿ ಹಾಕಿ ಮುಖ ಸ್ವಚ್ಛಗೊಳಿಸುತ್ತಿದ್ದಳು ಎಂದು ತನಿ ಖಾಧಿಕಾರಿಗಳು ಮಾಹಿತಿ ನೀಡಿದರು.
ಒಂದು ವೇಳೆ ಗ್ರಾಹಕರ ಮನೆ ದೂರವಿದ್ದರೆ, ಆರೋಪಿಗಳು ಕಳವು ಮಾಡಿದ ಕೀಯನ್ನು ನಕಲು ಮಾಡಿಸಿ ಇಟ್ಟುಕೊಳ್ಳುತ್ತಿದ್ದರು. ಮುಂದೆ ಅವರು ಬ್ಯೂಟಿ ಪಾರ್ಲರ್‌ಗೆ ಬಂದಾಗ, ಲತಾಳ ಸೂಚನೆಯಂತೆ ಅವರ ಮನೆಗೆ ತೆರಳಿ ನಕಲಿ ಕೀ ಬಳಸಿ ಕೃತ್ಯ ಎಸಗುತ್ತಿದ್ದರು.
ಆರೋಪಿಗಳ ವಿರುದ್ಧ ಜ್ಞಾನ ಭಾರತಿ, ಕುಂಬಳಗೋಡು, ಕುಮಾರ ಸ್ವಾಮಿ ಲೇಔಟ್, ತಾವರೆಕೆರೆ ಹಾಗೂ ಪೀಣ್ಯ ಠಾಣೆಯಲ್ಲಿ ಪ್ರಕರಣಗಳು ದಾಖ ಲಾಗಿವೆ. ಕಳವು ಮಾಡಿದ ಆಭರಣಗಳನ್ನು ಮುತ್ತೂಟ್ ಹಾಗೂ ಮಣಪ್ಪುರಂ ಫೈನಾನ್ಸ್ ಕಂಪೆನಿಗಳಲ್ಲಿ ಅಡವು ಇರಿಸಿ, ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧನಕ್ಕೆ ಪತ್ರಿಕೆಗಳಿಂದ ಸುಳಿವು
ಕಳವು ಪ್ರಕರಣವೊಂದರಲ್ಲಿ ಪೀಣ್ಯ ಪೊಲೀಸರು ಇತ್ತೀಚೆಗೆ ಲತಾಳನ್ನು ಬಂಧಿಸಿದ್ದರು. ಈ ಸಂಬಂಧ ಕೆಲ ಪತ್ರಿಕೆಗಳು ಆಕೆಯ ಛಾಯಾಚಿತ್ರ ಸಹಿತ ಸುದ್ದಿ ಪ್ರಕಟಿಸಿದ್ದವು. ನಂತರ ಆಕೆ ಜಾಮೀನಿನ ಮೇಲೆ ಬಿಡುಗಡೆ ಯಾದಳು. ಆದರೆ, ಪತ್ರಿಕೆಯಲ್ಲಿ ಆಕೆಯ ಛಾಯಾಚಿತ್ರ ನೋಡಿದ ಚಂದ್ರಾಲೇಔಟ್ ನಿವಾಸಿ ಪುಷ್ಪಲತಾ, ‘ನಾನು ಈಕೆಯ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದ ದಿನವೇ ಮನೆಯಲ್ಲಿ ಕಳ್ಳತನವಾಗಿತ್ತು’ ಎಂದು ಸುಳಿವು ನೀಡಿದರು. ಪುನಃ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವು ಪ್ರಕರಣಗಳು ಬೆಳಕಿಗೆ ಬಂದವು ಎಂದು ಚಂದ್ರಲೇಔಟ್ ಪೊಲೀಸರು ವಿವರಿಸಿದರು.
ಸಂಬಂಧಿ ಮನೆಯಲ್ಲೂ ಕಳವು
ಕುಮಾರಸ್ವಾಮಿ ಲೇಔಟ್‌ನಲ್ಲಿ ಆರೋಪಿ ಮಂಜೇಗೌಡನ ಸಂಬಂಧಿ ಗೀತಾ ಎಂಬುವರ ಮನೆ ಇದೆ. ಅವರು ಆರ್ಥಿಕವಾಗಿ ಸ್ಥಿತಿವಂತರಾಗಿದ್ದ ಬಗ್ಗೆ ಅರಿತಿದ್ದ ಮಂಜೇಗೌಡ, ಕಳವು ಮಾಡಲು ಸಂಚು ರೂಪಿಸಿದ್ದ. ಹಬ್ಬಕ್ಕೆ ಕರೆಯುವ ಸೋಗಿನಲ್ಲಿ ಅವರ ಮನೆಗೆ ತೆರಳಿದ್ದ ಆತ, ಮನೆಯ ಕೀಯನ್ನು ಕದ್ದು ತಂದಿದ್ದ.
ಬಳಿಕ ಕುಟುಂಬ ಸದಸ್ಯರು ಊರಿಗೆ ಹೋಗಿದ್ದಾಗ ಪ್ರಸಾದ್ ಮತ್ತು ಪ್ರಸನ್ನನ ಜತೆ ಮನೆಗೆ ನುಗ್ಗಿ, 800 ಗ್ರಾಂ ಚಿನ್ನಾಭರಣ ಹಾಗೂ 2 ಕೆ.ಜಿ ಬೆಳ್ಳಿ ವಸ್ತುಗಳನ್ನು ದೋಚಿದ್ದ. ಈ ಬಗ್ಗೆ ಇತ್ತೀಚೆಗೆ ದೂರು ಕೊಟ್ಟಿದ್ದ ಗೀತಾ, ಪೊಲೀಸರು ಸರಿಯಾಗಿ ತನಿಖೆ ನಡೆ ಸುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳ ಎದುರು ಆರೋಪ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.