ಬೆಂಗಳೂರು: ‘ಮಾನಸಿಕವಾಗಿ ಗಟ್ಟಿತನ ಇದ್ದರೆ ಮಾತ್ರ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಬಿ.ಕೆ.ಸುಮಿತ್ರ ಅವರು ಅಂತಹ ಸಾಧನೆ ಮಾಡಿದ್ದಾರೆ’ ಎಂದು ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಶ್ಲಾಘಿಸಿದರು.
ಸುಂದರ ಪ್ರಕಾಶನವು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗೌರಿ ಸುಂದರ್ ಸಂಪಾದಿಸಿರುವ ಗಾಯಕಿ ಬಿ.ಕೆ.ಸುಮಿತ್ರ ಅವರ ಸಂಗೀತ ಪಯಣದ ಕುರಿತ ‘ಗಾನ ಯಾನ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಗಾಯನ ಕ್ಷೇತ್ರದಲ್ಲಿ 50 ವರ್ಷಗಳನ್ನು ಪೂರೈಸಿರುವ ಅವರು ಅಭಿನಂದನೆಗೆ ಅರ್ಹರು. ಅವರ ಜೊತೆಗೆ ‘ಮದುವೆ ಮದುವೆ ಮದುವೆ’ ಎಂಬ ಚಲನಚಿತ್ರದಲ್ಲಿ ಹಾಡಿದ್ದೇನೆ. ಅವರೊಬ್ಬ ಸಂಗೀತದ ಅನನ್ಯ ಸಾಧಕಿ’ ಎಂದರು.
ರಾಜ್ಯಸಭಾ ಸದಸ್ಯ ಡಾ.ಎಂ.ರಾಮಾಜೋಯಿಸ್ ಮಾತನಾಡಿ, ‘ಸಂಗೀತ ಕಲಿಸಿದ ಆರಂಭಿಕ ಗುರುಗಳಾದ ಎಂ.ಪ್ರಭಾಕರ್, ಮಂಜಪ್ಪ, ತನ್ನ ಜೊತೆಗೆ ಹಾಡಿದ, ಸಹಕಾರ ನೀಡಿದ ಎಲ್ಲರನ್ನು ಸುಮಿತ್ರಾ ಅವರು ಕೃತಿಯಲ್ಲಿ ಸ್ಮರಿಸಿಕೊಂಡಿದ್ದಾರೆ.
ಇದು ಅವರ ಸರಳತೆ, ದೊಡ್ಡತನಕ್ಕೆ ಸಾಕ್ಷಿ’ ಎಂದರು.
ಕೃತಿ: ‘ಗಾನಯಾನ’
ಸಂಪಾದನೆ: ಗೌರಿ ಸುಂದರ್
ಬೆಲೆ: ರೂ 260
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.