ADVERTISEMENT

‘ಮಾಹಿತಿ ಹಕ್ಕು ಕಾಯ್ದೆ ದುರ್ಬಳಕೆ ತಡೆ ಅಗತ್ಯ’

ಕಾನೂನು ಸಚಿವ ಟಿ.ಬಿ.ಜಯಚಂದ್ರ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 19:53 IST
Last Updated 21 ಡಿಸೆಂಬರ್ 2013, 19:53 IST

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಳಕೆ ಮಾಡಿ ಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾಯ್ದೆಗೆ ಕೆಲ ತಿದ್ದುಪಡಿ ತರುವ ಅಗತ್ಯವಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಪ್ರತಿಪಾದಿಸಿದರು.

ಶನಿವಾರ ನಡೆದ ‘ಮಾಹಿತಿ ಹಕ್ಕು ಕಾಯ್ದೆ–2005’ ಕುರಿತ ಪ್ರಾದೇಶಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಕೆಲವರು ಮಾಹಿತಿ ಹಕ್ಕು ಕಾಯ್ದೆಯನ್ನು ಬೆದರಿಸುವುದಕ್ಕೂ ಬಳಸಿ ಕೊಳ್ಳುತ್ತಿ ದ್ದಾರೆ. ಇದಕ್ಕಾಗಿಯೇ ವೈಯಕ್ತಿಕ ಮಾಹಿತಿಯನ್ನೂ ಕಾಯ್ದೆಯಡಿ ಕೇಳುತ್ತಿದ್ದಾರೆ. ಇಂತಹ ಬೆಳವಣಿ ಗೆಗಳನ್ನು ನಿಯಂತ್ರಿಸುವ ತಿದ್ದುಪಡಿ ತರಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರದಲ್ಲಿನ ಆಡಳಿತ ಮತ್ತು ಯೋಜನೆಗಳ ಕುರಿತು ಹಿಂದೆ ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ದೊರೆಯುತ್ತಿರಲಿಲ್ಲ. ಆಡಳಿತ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವ ದಿಸೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಈ ಕಾಯ್ದೆಯನ್ನು ಇನ್ನೂ ಬಲ ಗೊಳಿಸುವ ಮೂಲಕ ಪಾರದರ್ಶ ಕತೆಯನ್ನು ಹೆಚ್ಚಿಸಬೇಕು.

ಇದಕ್ಕಾಗಿ ಕಾಯ್ದೆಗೆ ತರಬಹುದಾದ ತಿದ್ದುಪಡಿಗಳ ಕುರಿತು ಸಾರ್ವಜನಿಕರು ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರು ಸರ್ಕಾರಕ್ಕೆ ಸಲಹೆ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಎ.ಕೆ.ಎಂ.ನಾಯಕ್‌, ಮಾಹಿತಿ ಆಯುಕ್ತ ಡಿ.ತಂಗರಾಜ್, ಆಂಧ್ರಪ್ರದೇಶ ಮಾಹಿತಿ ಆಯುಕ್ತ ಇಮ್ತಿಯಾಜ್‌, ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕಿ ಅಮಿತಾ ಪ್ರಸಾದ್ ಮತ್ತಿತರರು  ಕಾರ್ಯಾಗಾರದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.