ಬೆಂಗಳೂರು: ‘ನರೇಂದ್ರ ಮೋದಿ ಅವರ ನೈಜ ಗುಜರಾತ್‌ನ ಕಥೆಯನ್ನು ಜನರ ಮುಂದಿಡುವ ಧೈರ್ಯ ಮಾಧ್ಯಮಗಳಿಗೆ ಇದೆಯೇ’ ಎಂದು ಪ್ರಶ್ನಿಸುವ ಮೂಲಕ ಆಮ್ ಆದ್ಮಿ ಪಕ್ಷದ (ಎಎಪಿ) ಅರವಿಂದ ಕೇಜ್ರಿವಾಲ್ ಶನಿವಾರವೂ ಪತ್ರಕರ್ತರನ್ನು ಕೆಣಕಿದರು. ಪಕ್ಷದ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ‘ರೋಡ್ ಷೋ’ದಲ್ಲಿ ಪಾಲ್ಗೊಂಡ ಅವರು, ವರದಿಗಾರರ ಜತೆ ಮಾತನಾಡಿದರು.
‘ಮೋದಿ ಅವರ ಗುಜರಾತ್ ಅಭಿವೃದ್ಧಿ ಕುರಿತ ಸತ್ಯ ಕಥೆಯನ್ನು ಮಾಧ್ಯಮಗಳು ಜನರ ಮುಂದೆ ತೆರೆದಿಡಲು ಹಿಂದೇಟು ಹಾಕುತ್ತಿವೆ. ಧೈರ್ಯದಿಂದ ಆ ಕಥೆಯನ್ನು ಅವುಗಳು ಹೇಳಬಲ್ಲವೇ ಎನ್ನುವುದು ಈಗಲೂ ದೊಡ್ಡ ಪ್ರಶ್ನೆಯಾಗಿದೆ’ ಎಂದು ಹೇಳಿದರು.
‘ಮೋದಿ ಒಬ್ಬ ಸುಳ್ಳುಗಾರ. ರಾಜ್ಯದಲ್ಲಿ ಇರುವ ಸ್ಥಿತಿಯೇ ಬೇರೆ. ಹೊರಗಡೆ ತೋರುತ್ತಿರುವ ಅದರ ಚಿತ್ರಣವೇ ಬೇರೆ’ ಎಂದು ದೂರಿದರು. ‘ಗುಜರಾತ್‌ನಲ್ಲಿ ರೈತರ ಸ್ಥಿತಿ ಚಿಂತಾಜನಕವಾಗಿದೆ. ಅವರ ಭೂಮಿ ಯನ್ನು ಕಿತ್ತುಕೊಳ್ಳಲಾಗಿದೆ. ಮೋದಿ ಖಂಡಿತ ರೈತರ ರಕ್ಷಕ ಅಲ್ಲ. ದೇಶದ ಜನರಿಗೆ ಸುಳ್ಳು ಹೇಳಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಗುಜರಾತ್‌ನ ಈ ಸತ್ಯ ಕಥೆ ಗೊತ್ತಾದರೆ ಯಾವ ರೈತನೂ ಅವರಿಗೆ ಮತ ನೀಡುವುದಿಲ್ಲ. ನಾನು ರಾಜಕೀಯ ಉದ್ದೇಶದಿಂದ ಈ ಆರೋಪ ಮಾಡುತ್ತಿಲ್ಲ. ಆ ರಾಜ್ಯದಲ್ಲಿ ಸುತ್ತಾಡಿ ಸತ್ಯ ಸಂಗತಿಯನ್ನು ತಿಳಿದುಕೊಂಡು ಮಾತನಾಡುತ್ತಿದ್ದೇನೆ’ ಎಂದು ಹೇಳಿದರು.
‘ಗುಜರಾತ್ ಸರ್ಕಾರದ ಭ್ರಷ್ಟಾಚಾರದ ಮುಖವೂ ಅನಾವರಣ ಆಗಬೇಕಲ್ಲವೇ’ ಎಂದು ಕೇಳಿದ ಅವರು, ‘ದೆಹಲಿ ಚುನಾವಣೆಗೆ ಮುಂಚೆ ಮಾಧ್ಯಮವೊಂದು ನಮ್ಮ ವಿರುದ್ಧ ಕುಟುಕು ಕಾರ್ಯಾಚರಣೆ ನಡೆಸಿತ್ತು. ಆಗ ನಾವು ಸುಮ್ಮನಿದ್ದೆವು’ ಎಂದು ತಿಳಿಸಿದರು. ‘ಇಂತಹ ಸತ್ಯಶೋಧನೆ ಮೋದಿ ವಿಷಯದಲ್ಲೂ ನಡೆಯಬೇಕು’ ಎಂದು ಆಗ್ರಹಿಸಿದರು. ‘ಮೋದಿ ಪರ ಪ್ರಚಾರಕ್ಕೆ ಯಾವ ಮಾಧ್ಯಮಗಳಿಗೆ ಹಣ ನೀಡಲಾಗಿದೆ’ ಎಂಬ ಪ್ರಶ್ನೆಗೆ ಉತ್ತರಿಸಲು ಕೇಜ್ರಿವಾಲ್ ನಿರಾಕರಿಸಿದರು.
10 ತಾಸು, 40 ಕಿಮೀ: ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ನಗರದಲ್ಲಿ ಶನಿವಾರ ರೋಡ್ ಷೋ ನಡೆಸಿದರು. ಹತ್ತು ಗಂಟೆಗಳಿಗೂ ಅಧಿಕ ಕಾಲ ಸುಮಾರು 40 ಕಿ.ಮೀ. ದೂರ ರ್‌್ಯಾಲಿ ನಡೆಸಿದ ಅವರು ಕಾರ್ಯಕರ್ತರಲ್ಲಿ ಹುರುಪು ತುಂಬಿದರು.
ಬೆಳಿಗ್ಗೆ ಹೆಬ್ಬಾಳದಿಂದ ರ್‍ಯಾಲಿ ಆರಂಭಗೊಂಡು ಆರ್.ಟಿ.ನಗರ, ಲಾಲ್‌ಬಾಗ್, ಜಯನಗರ, ಬಸವನಗುಡಿ, ಮೈಸೂರು ರಸ್ತೆ, ರಾಜಾಜಿನಗರ ಮತ್ತಿತರ ಕಡೆಗಳಲ್ಲಿ ಸಾಗಿ ಸಂಜೆ ಮಲ್ಲೇಶ್ವರದಲ್ಲಿ ಕೊನೆಗೊಂಡಿತು. ಮುಂಬೈಯಲ್ಲಿ ರ್‍ಯಾಲಿ ವೇಳೆ ಗೊಂದಲ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ, ಗದ್ದಲಕ್ಕೆ ಅವಕಾಶ ಇಲ್ಲದಂತೆ ನಗರದ ಪೊಲೀಸರು ಸಾಕಷ್ಟು ಮುಂಜಾಗ್ರತೆ ವಹಿಸಿದ್ದರು. ರೋಡ್ ಷೊೋ ಶಿಸ್ತುಬದ್ಧವಾಗಿ ಸಾಗಿತ್ತು. ಸುಮಾರು ಸಾವಿರಕ್ಕೂ ಅಧಿಕ ಮಂದಿ ರೋಡ್ ಷೋದಲ್ಲಿ ಸಾಗಿದರು. ರೋಡ್ ಷೊೋ ವೇಳೆ ಕೇಜ್ರಿವಾಲ್ ಅವರು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಳಲಿದ ಕೇಜ್ರಿವಾಲ್: ಬೆಳಿಗ್ಗೆ 9 ಗಂಟೆಯಿಂದ ನಿಂತುಕೊಂಡೇ ರೋಡ್‌ಶೋ ನಡೆಸಿದ ಕೇಜ್ರಿವಾಲ್ ಸಂಜೆಯ ವೇಳೆಗೆ ತುಸು ಬಳಲಿದಂತೆ ಕಂಡುಬಂದರು. ಹಾಗಾಗಿ ಅವರು ರೋಡ್‌ಶೋ ಕಾರ್ಯಕ್ರಮವನ್ನು ಅರ್ಧ ಗಂಟೆ ಮುಂಚಿತವಾಗಿಯೇ ಮುಗಿಸಿದರು. ಚಾಲುಕ್ಯ ವೃತ್ತದ ಬಳಿ ಇರುವ ರಾಷ್ಟ್ರೀಯ ಮಿಲಿಟರಿ ಸ್ಮಾರಕದವರೆಗೂ ಎಎಪಿ ಕಾರ್ಯಕರ್ತರು ಬಂದರು. ಆದರೆ ಕೇಜ್ರಿವಾಲ್ ವೈಯಾಲಿ ಕಾವಲ್‌ನಲ್ಲಿ ಯಾತ್ರೆಯನ್ನು ಮೊಟಕುಗೊಳಿಸಿದರು.
ಭೋಜನಕೂಟಕ್ಕೆ 250 ಜನ
ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷಕ್ಕೆ ದೇಣಿಗೆ ಸಂಗ್ರಹಿಸಲು ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಭೋಜನಕೂಟದಲ್ಲಿ ಅಂದಾಜು 250 ಜನ ಪಾಲ್ಗೊಂಡಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಾಲ್ಗೊಂಡವರೆಲ್ಲರೂ ಕನಿಷ್ಠ ₨ 20 ಸಾವಿರ ಪಾವತಿಸಿ, ಹೆಸರು ನೋಂದಾಯಿಸಿಕೊಂಡಿದ್ದರು. ಸಾಫ್ಟ್‌ವೇರ್ ತಂತ್ರಜ್ಞರು, ವ್ಯಾಪಾರಿಗಳು, ಮ್ಯಾನೇಜರ್‌ಗಳು ಹೆಸರು ನೋಂದಾಯಿಸಿಕೊಂಡವರಲ್ಲಿ ಪ್ರಮುಖರು. ರಾಜಭವನ ರಸ್ತೆಯಲ್ಲಿರುವ ಕ್ಯಾಪಿಟಲ್ ಹೋಟೆಲ್‌ನಲ್ಲಿ ಕಾರ್ಯಕ್ರಮ ನಡೆಯಿತು. ಇದಾದ ನಂತರ, ಇನ್ನೊಂದು ಖಾಸಗಿ ಹೋಟೆಲ್‌ನಲ್ಲೂ ಭೋಜನಕೂಟ ಆಯೋಜಿಸಲಾಗಿದ್ದು. ಇದರಲ್ಲೂ ಕೇಜ್ರಿವಾಲ್ ಪಾಲ್ಗೊಂಡಿದ್ದರು. ಆದರೆ ಇಲ್ಲಿ ನೋಂದಣಿ ಶುಲ್ಕ ಪಡೆದಿಲ್ಲ ಎಂದು ಮುಖಂಡರೊಬ್ಬರು ತಿಳಿಸಿದರು.
ಕೇಜ್ರಿವಾಲ್ ಜತೆ ಫಟಾಫಟ್ ಪ್ರಶ್ನೋತ್ತರ:
ಅಮಿತ್ ಷಾ ಗೃಹ, ಬಿಎಸ್‌ವೈ ಗಣಿಮಂತ್ರಿ!
ಬೆಂಗಳೂರು: ನಗರದಲ್ಲಿ ಶನಿವಾರ ರೋಡ್ ಷೋ ನಡೆಸಿದ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಅಲ್ಲಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಒಂದೊಂದು ಉತ್ತರ ನೀಡುತ್ತಿದ್ದರು. ಅವುಗಳ ಸಂಗ್ರಹ ರೂಪ ಇಲ್ಲಿದೆ:
*ಎಎಪಿ ಹೋರಾಟ ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ದಕ್ಷಿಣ ಭಾರತಕ್ಕೂ ಅದು ಸಂಬಂಧಪಟ್ಟಿದೆಯೇ?
ಪ್ರಾಮಾಣಿಕತೆ ಹಾಗೂ ಸತ್ಯಕ್ಕೆ ಗಡಿ ಎಂಬುದಿಲ್ಲ. ಇಂತಹ ವಿಷಯಗಳು ಬಂದಾಗ ನೀವು ದೇಶದ ಯಾವ ಭಾಗದವರು ಎನ್ನುವ ಪ್ರಶ್ನೆ ಏಳುವುದಿಲ್ಲ.
*ದೇಶದಾದ್ಯಂತ ಎಷ್ಟು ಕ್ಷೇತ್ರಗಳನ್ನು ಎಎಪಿ ಗೆಲ್ಲಲಿದೆ? ಬೆಂಗಳೂರಿನಲ್ಲೂ ಜಯದ ನಿರೀಕ್ಷೆ ಇದೆಯೇ?
(ನಗುತ್ತಾ) ನೂರಕ್ಕೂ ಅಧಿಕ ಸೀಟುಗಳನ್ನು ಗೆಲ್ಲುತ್ತೇವೆ. ಬೆಂಗಳೂರಿನ ಮೂರೂ ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆ ಇದೆ.
*ಬಿ.ಎಸ್.ಯಡಿಯೂರಪ್ಪ ಕುರಿತು...
ಯಡಿಯೂರಪ್ಪ ಕುರಿತು ಇಡೀ ದೇಶದ್ದು ಒಂದೇ ಅಭಿಪ್ರಾಯ. ಗಣಿಗಾರಿಕೆ ಮೂಲಕ ಕರ್ನಾಟಕದ ಸಂಪತ್ತನ್ನು ಲೂಟಿ ಮಾಡಲು ಕಾರಣವಾದ ವ್ಯಕ್ತಿ ಅವರು. ಬಿಜೆಪಿಗೆ ಅವಕಾಶ ಸಿಕ್ಕರೆ ನರೇಂದ್ರ ಮೋದಿ ಪ್ರಧಾನಿ, ಅಮಿತ್ ಶಾ ಗೃಹ ಸಚಿವ ಮತ್ತು ಯಡಿಯೂರಪ್ಪ ಗಣಿ ಸಚಿವರಾಗುತ್ತಾರೇನೋ. ಅದೊಂದು ಕಲ್ಪನಾತೀತವಾದ ಸನ್ನಿವೇಶ.
*ದೆಹಲಿ ಚುನಾವಣೆಯಲ್ಲಿ ಎಎಪಿ ಮತ್ತೆ ಗೆದ್ದರೆ ಮುಖ್ಯಮಂತ್ರಿ ಆಗುವಿರಾ?
ಮುಖ್ಯಮಂತ್ರಿ ಹುದ್ದೆ ನನ್ನ ಸ್ವತ್ತಲ್ಲ. ಚುನಾವಣೆ ನಡೆದ ಮೇಲೆ ಮುಂದಿನ ವಿಚಾರ.
*ವಾರಾಣಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವಿರಾ?
ವಾರಣಾಸಿಯಲ್ಲಿ ಇನ್ನೂ ಮೋದಿಗೆ ಟಿಕೆಟ್ ಸಿಕ್ಕಿಲ್ಲ. ಅವರ ನಿರ್ಧಾರ ಹೊರಬಿದ್ದ ಮೇಲೆ ನನ್ನ ತೀರ್ಮಾನ ಪ್ರಕಟಿಸುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.