
ಬೆಂಗಳೂರು: ‘ರಾಜಕಾಲುವೆ ಒತ್ತುವರಿ ಮಾಡಿದವರನ್ನು ಸುಮ್ಮನೆ ಬಿಡಬೇಕಾ’ ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಎಷ್ಟೇ ಪ್ರಭಾವಿಗಳಿದ್ದರೂ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸುವುದಿಲ್ಲ’ ಎಂದು ಹೇಳಿದರು.
‘ಬಿಲ್ಡರ್‌ಗಳಿರಲಿ, ಪ್ರಭಾವಿಗಳಿರಲಿ ಯಾರೇ ಒತ್ತುವರಿ ಮಾಡಿದ್ದರೂ ತೆರವು ಮಾಡಿಸುತ್ತೇವೆ. ಒಳ್ಳೆಯ ಕೆಲಸ ಮಾಡುವಾಗ ಕೆಲವರಿಗೆ ತೊಂದರೆಯಾಗುವುದು ಸಹಜ. ಮಳೆಬಂದಾಗ ಎದುರಾಗುವ ಬೆಂಗಳೂರಿನ ಸಮಸ್ಯೆ ಪರಿಹಾರವಾಗಬೇಕಾದರೆ ಒತ್ತುವರಿ ತೆರವು ಅನಿವಾರ್ಯ’ ಎಂದು ಮುಖ್ಯಮಂತ್ರಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರತಿಪಾದಿಸಿದರು.
‘ರಾಜಕಾಲುವೆ ಎಂದು ಗೊತ್ತಿದ್ದರೂ ದಾಖಲೆ ನೀಡಿದ್ದು ಅಧಿಕಾರಿಗಳ ತಪ್ಪಲ್ಲವೇ?’ ಎಂಬ ಪ್ರಶ್ನೆಗೆ, ‘ಅಧಿಕಾರಿಗಳೂ ತಪ್ಪು ಮಾಡಿದ್ದಾರೆ. ಅಧಿಕಾರಿಗಳ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದೇನೆ. ರಾಜಕಾಲುವೆ ಮೇಲೆ ಮನೆ ಕಟ್ಟಿಕೊಂಡಿದ್ದು ಜನರ ತಪ್ಪಲ್ಲವೇ? ಅಂತಹವರನ್ನು ಸುಮ್ಮನೆ ಬಿಡಬೇಕಾ’ ಎಂದು ಮರು ಪ್ರಶ್ನೆ ಹಾಕಿದರು.
ಬಿಲ್ಡರ್, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು–ಕೋಳಿವಾಡ: ರಾಜಕಾಲುವೆ, ಕೆರೆ ಅಂಗಳ ಒತ್ತುವರಿ ಮಾಡಿ ಅಮಾಯಕರಿಗೆ ನಿವೇಶನ ಮಾರಿದ ಬಿಲ್ಡರ್‌ಗಳು, ಅಕ್ರಮ ಖಾತೆ ಮಾಡಿಕೊಟ್ಟ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಕೆರೆ ಒತ್ತುವರಿ ಸದನ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.