ADVERTISEMENT

‘ವಾಸ್ತು, ಜ್ಯೋತಿಷದಿಂದ ಕ್ಷೋಭೆ’

ದೊಡ್ಡರಂಗೇಗೌಡ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 20:25 IST
Last Updated 24 ಸೆಪ್ಟೆಂಬರ್ 2013, 20:25 IST

ಬೆಂಗಳೂರು: ‘ವಾಸ್ತು, ಜ್ಯೋತಿಷ ಮಾನಸಿಕ ಕ್ಷೋಭೆಯನ್ನು ಹೆಚ್ಚಿಸುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಇವುಗಳ ಮೇಲಿನ ನಂಬಿಕೆ ಹೆಚ್ಚಾಗುತ್ತಿದೆ’ ಎಂದು ಹಿರಿಯ ಸಾಹಿತಿ ಹಾಗೂ ವಿಧಾನ ಪರಿಷತ್‌ ಸದಸ್ಯ ದೊಡ್ಡರಂಗೇಗೌಡ ಹೇಳಿದರು.

ಬಸವನಗುಡಿ ನ್ಯಾಷನಲ್‌ ಕಾಲೇಜು ಹಾಗೂ ಕರ್ನಾಟಕ ಚರ್ಚಾ ವೇದಿಕೆಯು ಸೋಮವಾರ ಆಯೋಜಿಸಿದ್ದ ‘ಎಚ್‌.ಎಂ.ವನಿತಾ ಸ್ಮಾರಕ 12 ನೇ ರಾಜ್ಯಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆ’ ಯನ್ನು ಉದ್ಘಾಟಿಸಿ  ಅವರು ಮಾತನಾಡಿದರು.

‘ಜ್ಯೋತಿಷ, ವಾಸ್ತು ಇತ್ಯಾದಿಗಳನ್ನು ನಂಬದೆ, ನಿಮ್ಮ ಆತ್ಮಶಕ್ತಿ, ಬುದ್ಧಿಶಕ್ತಿ, ದೇಹಶಕ್ತಿಯಲ್ಲಿ ನಂಬಿಕೆ ಇಟ್ಟರೆ, ಆಗ ನಿಮ್ಮ ಜೀವನದ ಶಿಲ್ಪಿಗಳು ನೀವಾಗುತ್ತೀರಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ವಿದ್ಯಾರ್ಥಿಗಳು ಸ್ವತಂತ್ರ ನಿಲುವು ತಳೆದು, ವೈಚಾರಿಕವಾಗಿ ಯೋಚಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಜನಪರ ಮತ್ತು ಅಭಿವೃದ್ಧಿಪರವಾಗಿ ಯೋಚಿಸುವ ಗಣ ಬೆಳೆಸಿಕೊಳ್ಳಬೇಕು’ ಎಂದರು.

ಕಾಲೇಜು ಪ್ರಾಂಶುಪಾಲರಾದ ಡಾ.ಎಂ.ಲೀಲಾವತಿ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಗ್ರಹಿಕೆ ಮುಖ್ಯ. ಯಾರು ಹೆಚ್ಚು ಗ್ರಹಿಸುತ್ತಾರೋ ಅವರು ಗೆಲ್ಲುತ್ತಾರೆ. ಚರ್ಚಾ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಗ್ರಹಿಕೆಯ ಜ್ಞಾನವನ್ನು ಹೆಚ್ಚಿಸುತ್ತವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.