ADVERTISEMENT

‘ಶಿಲಾಯುಗದ ಕಲಾಕೃತಿಗಳು ಇಂದಿನ ಕಲಾವಿದರಿಗೆ ಮಾದರಿ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 20:07 IST
Last Updated 3 ಜನವರಿ 2014, 20:07 IST

ಬೆಂಗಳೂರು: ‘ಯಾವುದೇ ವಸ್ತುವನ್ನು ನಮ್ಮ ಒಳಮನಸ್ಸಿನಿಂದ ಗಮನಿಸಿದಾಗ ಮಾತ್ರ ಒಂದು ಕಲಾಕೃತಿ ಮೂಡಲು ಸಾಧ್ಯ’ ಎಂದು ಹಿರಿಯ ಕಲಾವಿದ ಎಂ.ಬಿ.­ಪಾಟೀಲ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಆಧುನಿಕ ಕಲಾ ಸಂಗ್ರ­ಹಾಲಯ, ನವದೆಹಲಿಯ ಇಂದಿರಾ­ಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾಲ­ಯದ ಬೆಂಗಳೂರು ವೃತ್ತದ ವತಿಯಿಂದ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿಲಾಕಲಾ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾ­ಡಿದರು.
ಆಧುನಿಕ ಸೌಲಭ್ಯಗಳಿಲ್ಲದ ಶಿಲಾಯು­ಗದ ಕಾಲದಲ್ಲಿ ಆದಿ ಮಾನವನು ಚಿತ್ರಿಸಿದ ಕಲಾಕೃತಿಗಳು ಇಂದಿನ ಕಲಾ­ವಿದರಿಗೆ ಮಾದರಿಯಾಗಿವೆ. ಇಂತಹ ಕಲಾಕೃತಿಗಳ ರಚನೆಗೆ ಕಲಾವಿದನ ಒಳಮನಸ್ಸು ಸದಾ ಜಾಗೃತವಾಗಿರಬೇಕು ಎಂದು ಹೇಳಿದರು.

ನವದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಗೌರವ ನಿರ್ದೇಶಕ ಷ.ಶೆಟ್ಟರ್‌ ಮಾತನಾಡಿ, ಆದಿ ಮಾನವ ಯಾವುದೇ ಪ್ರಚಾರ, ಮಾರಾಟದ ಉದ್ದೇಶವಿಲ್ಲದೆ ತನ್ನ ಭಾವನೆಗಳನ್ನು ಅಭಿವ್ಯಕ್ತಿಸಲು  ಶಿಲೆಯ ಮೇಲೆ ಅದ್ಬುತ ಕಲಾಕೃತಿಗಳನ್ನು ರಚಿಸಿ­ದ್ದಾನೆ. ಇದು ಆದಿ ಮಾನವನಿಗೂ ಕಲೆಯ ಜೊತೆಗೆ ಮುಖಾಮು­ಖಿ­ಯಾ­ಗುವ ಬಯಕೆ ಇತ್ತು ಎಂಬುದನ್ನು ತಿಳಿಸುತ್ತದೆ’ ಎಂದು ಅಭಿಪ್ರಾ­ಯಪಟ್ಟರು.

ಕಾರ್ಯಕ್ರಮದಲ್ಲಿ ಪ್ರದರ್ಶನದ ಕುರಿತು ಆಯೋಜಸಿದ್ದ ಚಿತ್ರಕಲಾ ಸ್ಪರ್ಧೆ­ಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯದ ನಿರ್ದೇಶಕ ಕೆ.ಜಿ.ಕುಮಾರ್‌, ಕವಿ ಸುಬ್ಬು ಹೊಲೆ­ಯಾರ್‌ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.