ADVERTISEMENT

‘ಶಿಶುಗೀತೆಗಳಿಂದ ಮಕ್ಕಳ ಕಲ್ಪನೆ ವಿಸ್ತಾರ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 20:03 IST
Last Updated 24 ಸೆಪ್ಟೆಂಬರ್ 2013, 20:03 IST
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರನ್ನು ಪರಿಷತ್ತಿನ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಅವರು ಸನ್ಮಾನಿಸಿದರು. ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಇದ್ದಾರೆ
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರನ್ನು ಪರಿಷತ್ತಿನ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಅವರು ಸನ್ಮಾನಿಸಿದರು. ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಇದ್ದಾರೆ   

ಬೆಂಗಳೂರು: ‘ಮಕ್ಕಳ ಮನಸ್ಸನ್ನು ಸೃಜನಶೀಲತೆ ಯಿಂದಲೇ ಅರಳಿಸಬೇಕು ಎಂಬ ಶಿವರಾಮ ಕಾರಂತರ ಆಶಯವನ್ನು ಎಚ್‌.ಎಸ್. ವೆಂಕಟೇಶಮೂರ್ತಿ ಅವರು ತಮ್ಮ ಶಿಶುಗೀತೆಗಳ ಮೂಲಕ ನಿಜಗೊಳಿಸಿದ್ದಾರೆ’ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈಚೆಗೆ ನಡೆದ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶೈಕ್ಷಣಿಕ ವ್ಯವಸ್ಥೆಯೇ ಅಸಮರ್ಪಕವಾಗಿರುವ ಈ ಹೊತ್ತಿನಲ್ಲಿ ಮಕ್ಕಳನ್ನು ಹಣ ಗಳಿಸುವ ಯಂತ್ರ, ಮಾಹಿತಿ ಕೋಶಗಳಾಗಿಯೂ ರೂಪಿಸುತ್ತಿದ್ದೇವೆ. ಆದರೆ, ವೆಂಕಟೇಶಮೂರ್ತಿ ಅವರ ಶಿಶು ಕವಿತೆಗಳು ಮಕ್ಕಳ ಕಲ್ಪನೆಯನ್ನು ವಿಸ್ತರಿಸಿ ಅವರ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿದೆ’ ಎಂದು ಶ್ಲಾಘಿಸಿದರು.

‘ಬಾಲ್ಯ, ಕುತೂಹಲ, ಆಸಕ್ತಿ, ಮುಗ್ಧತೆ ಇವೆಲ್ಲ ವನ್ನು ಕೂಡ ಬದುಕಿನುದ್ದಕ್ಕೂ ಕಳೆದುಕೊಳ್ಳು ತ್ತಿದ್ದೇವೆ. ಆದರೆ ಕವಿಯಾದವನು ಇವೆಲ್ಲವನ್ನೂ ಪಡೆಯುತ್ತಾ, ಉಳಿಸಿಕೊಳ್ಳುತ್ತಾ ಹೋಗುತ್ತಾನೆ. ವೆಂಕಟೇಶಮೂರ್ತಿ ಅವರ ಕವಿತೆಗಳು ಇವೆಲ್ಲವನ್ನು ಓದುಗನಿಗೆ ದಕ್ಕಿಸಿಕೊಡುವಲ್ಲಿ ಯಶಸ್ವಿ ಯಾಗು ತ್ತದೆ’ ಎಂದ ಅವರು, ‘ಒಳಗೆ ಇರುವ ಮಗು ಮನಸ್ಸನ್ನು ನಿರಂತರವಾಗಿ ಕಾಪಿಟ್ಟುಕೊಳ್ಳಲು ಅವರಿಗೆ ಸಾಧ್ಯವಾಗಿರುವುದರಿಂದಲೇ ಅತ್ಯುತ್ತಮ ಶಿಶುಗೀತೆಗಳನ್ನು ರಚಿಸಿದ್ದಾರೆ’ ಎಂದರು.

‘ಕನಸುಗಳನ್ನು ಉತ್ತಿ, ಬಿತ್ತುವುದನ್ನು ರೂಢಿಸಿ ಕೊಳ್ಳಬೇಕು. ಸಾಧನೆಯ ಹಾದಿಗೆ ಕನಸುಗಳು ಮೆಟ್ಟಿಲು. ಭ್ರಷ್ಟ ರಾಜಕಾರಣದ ನಡುವೆ ಕನಸು ಗಳನ್ನು ಕಾಣುವುದನ್ನು ಯುವಜನತೆ ಮರೆಯ ಬಾರದು’ ಎಂದು ಸಲಹೆ ನೀಡಿದರು.

‘ಗುಬ್ಬಿ ಸಂವಾದ’  ಪದ್ಯಗಳಲ್ಲಿ ಮುಗ್ಧತೆ ಹಾಗೂ ಗಾಢ ವಾದ ಅನುಭವ ಮುಖಾಮುಖಿ ಯಾಗು ತ್ತದೆ. ಅಲ್ಲದೇ ಒಳಗಿರುವ ಮಗು ಮನಸ್ಸನ್ನು ಪೋಷಿಸುವ ಶಕ್ತಿ ಅವರ ಕವಿತೆಗಳಿಗಿದೆ’ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ‘ಕುವೆಂಪು ಅವರು ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಚಂದದ ನುಡಿಗಟ್ಟನ್ನು ಕಟ್ಟಿಕೊಟ್ಟಿದ್ದಾರೆ. ಪ್ರಸ್ತುತ ದಿನಗಳಲ್ಲಿ ಹದಗೆಡುತ್ತಿರುವ ಈ ವ್ಯವಸ್ಥೆಯು ಈ ನುಡಿಗಟ್ಟಿನ ಅರ್ಥವನ್ನು ಅಳವಾಗಿ ಅರಿಯುವ ಅಗತ್ಯ ಇದೆ’ ಎಂದರು.

‘ಇಂಗ್ಲಿಷ್ ಮಾಧ್ಯಮವೇ ಹೆಚ್ಚಾಗುತ್ತಿರುವು ದರಿಂದ  ಮಕ್ಕಳು ಕಿಂದರಜೋಗಿ, ಜಿ.ಪಿ.ರಾಜರತ್ನಂ ಕವಿತೆಗಳನ್ನು ಓದುವ ಭಾಗ್ಯವನ್ನೇ ಕಳೆದು ಕೊಳ್ಳುತ್ತಿದ್ದಾರೆ. ಕನ್ನಡ ನಾಡಿನ  ಮಕ್ಕಳು ಕನ್ನಡ ಸಾಹಿತ್ಯವನ್ನು ಕಲಿಯದೇ ಹೋದರೆ ಈ ಭಾಷೆ ಉಳಿಯಲು ಸಾಧ್ಯವಿದೆಯೇ?’ ಎಂದು ಪ್ರಶ್ನಿಸಿದ ಅವರು, ‘ಪ್ರೌಢಶಾಲಾ ಶಿಕ್ಷಣದವರೆಗೆ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಆ ಮೂಲಕ ಕನ್ನಡ ಭಾಷೆ ಉಳಿಸುವ ಪ್ರಯತ್ನ ಮಾಡಬೇಕು’ ಎಂದು ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ  ಸಚಿವೆ ಉಮಾಶ್ರೀ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.