ಬೆಂಗಳೂರು: ‘ಸಮಾಜದಲ್ಲಿ ಆಗುತ್ತಿರುವ ಅನ್ಯಾಯಗಳ ಬಗ್ಗೆ ಸಜ್ಜನರು ಮೌನ ತಾಳಿರುವ ಕಾರಣ ಜಗತ್ತು ಹೀನಾಯ ಸ್ಥಿತಿಗೆ ತಲುಪುತ್ತಿದೆ. ಸಮಾಜದಲ್ಲಿ ಹೆಚ್ಚುತ್ತಿರುವ ಅನ್ಯಾಯ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಯುವಜನರನ್ನು ಸಿದ್ಧಪಡಿಸಬೇಕಿದೆ’ ಎಂದು ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಸ್.ಆರ್.ಬನ್ನೂರಮಠ್ ಹೇಳಿದರು.
ನಗರದ ಬಿಎಂಎಸ್ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವ ಅಂಗವಾಗಿ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರ ಮಟ್ಟದ ಬಿ.ಎಂ.ಶ್ರೀನಿವಾಸಯ್ಯ ಸ್ಮಾರಕ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
‘ನ್ಯಾಯಾಲಯದಲ್ಲಿ ಕೆಲ ಸಂದರ್ಭದಲ್ಲಿ ನ್ಯಾಯಾಧೀಶರು ಅನಿರೀಕ್ಷಿತ ಪ್ರಶ್ನೆ ಕೇಳುತ್ತಾರೆ. ಆಗ ವಕೀಲರು ಜಾಣತನ ತೋರಬೇಕಾಗುತ್ತದೆ. ಇಂತಹ ಸನ್ನಿವೇಶಗಳನ್ನು ಎದುರಿಸಲು ಅಣಕು ನ್ಯಾಯಾಲಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತದೆ’ ಎಂದರು.
ಕಾಲೇಜಿನ ಟ್ರಸ್ಟಿ ಕೆ.ಜೈರಾಜ್, ‘ಇತ್ತೀಚಿನ ದಿನಗಳಲ್ಲಿ ವಕೀಲರಲ್ಲಿ ಸಿದ್ಧತೆ ಕೊರತೆ ಕಾಣುತ್ತಿದೆ. ವಕೀಲರಲ್ಲಿ ಸಂವಹನ ಕೌಶಲದ ಕೊರತೆಯಿಂದ ಅನೇಕ ಸಂದರ್ಭಗಳಲ್ಲಿ ವ್ಯತಿರಿಕ್ತ ತೀರ್ಪು ಬರುತ್ತದೆ. ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಲ್ಲಿ ಕೌಶಲ ಹೆಚ್ಚುತ್ತದೆ’ ಎಂದರು.
ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪ್ರೊ.ವಿ.ಬಿ.ಕುಟಿನ್ಹೊ, ‘ಅಣಕು ನ್ಯಾಯಾಲಯ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಅನೇಕ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಪ್ರಖ್ಯಾತ ವಕೀಲರಾಗಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.