ADVERTISEMENT

‘ಸಮಾನ ಶಿಕ್ಷಣ ನೀತಿ ಜಾರಿಗೆ ಚಳವಳಿ ಅಗತ್ಯ’

ಗೋಷ್ಠಿಯಲ್ಲಿ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2016, 19:30 IST
Last Updated 13 ಮಾರ್ಚ್ 2016, 19:30 IST
ವಿ.ಪಿ.ನಿರಂಜನಾರಾಧ್ಯ ಅವರು ಹೇಮಲತಾ ಮಹಿಷಿ ಅವರೊಂದಿಗೆ ಸಮಾಲೋಚನೆ ನಡೆಸಿದರು.   -ಪ್ರಜಾವಾಣಿ ಚಿತ್ರ
ವಿ.ಪಿ.ನಿರಂಜನಾರಾಧ್ಯ ಅವರು ಹೇಮಲತಾ ಮಹಿಷಿ ಅವರೊಂದಿಗೆ ಸಮಾಲೋಚನೆ ನಡೆಸಿದರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದಲ್ಲಿ ಸಮಾನ ಶಿಕ್ಷಣ ನೀತಿ ಜಾರಿಯಾಗಲು ಸ್ವಾತಂತ್ರ್ಯ ಚಳವಳಿ ನಡೆದ ಮಾದರಿಯಲ್ಲೇ ಮತ್ತೊಂದು ಚಳವಳಿ ನಡೆಯಬೇಕಾದ ಅಗತ್ಯ ಇದೆ’  ಎಂದು ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ ಅವರು ಹೇಳಿದರು.

‘ಸಂಕ್ರಮಣ’ ಸಾಹಿತ್ಯ ಪತ್ರಿಕೆಗೆ 50 ವರ್ಷಗಳು ತುಂಬಿದ ಪ್ರಯುಕ್ತ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಸಂಕ್ರಮಣ ಬಳಗದ ಬಂಗಾರ ಹಬ್ಬ’ ಹಾಗೂ ‘ಪ್ರಥಮ ಸಂಕ್ರಮಣ ಸಾಹಿತ್ಯ ಸಮ್ಮೇಳನ’ ದಲ್ಲಿ ‘ಶಿಕ್ಷಣದಲ್ಲಿ ಸಮಾನತೆಯ ಹುಡುಕಾಟ’ ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯಾಗಿ 68 ವರ್ಷ, ಸ್ವಾತಂತ್ರ್ಯವನ್ನು ಒಪ್ಪಿಕೊಂಡು 66 ವರ್ಷಗಳು ಕಳೆದರೂ ಶಿಕ್ಷಣದಲ್ಲಿ ಸಮಾನತೆ ಬಗ್ಗೆ ಮಾತನಾಡಬೇಕಾಗಿರುವುದು ಅತ್ಯಂತ ನೋವಿನ ಸಂಗತಿ’ ಎಂದರು.

‘1882ರಲ್ಲಿ ಜ್ಯೋತಿಬಾಫುಲೆ ಅವರು ಎಲ್ಲರಿಗೂ ಶಿಕ್ಷಣ ಸಿಗಬೇಕು ಮತ್ತು ಸಮಾನ ಶಿಕ್ಷಣ ನೀತಿ ಜಾರಿಗೊಳಿಸಬೇಕು ಎಂಬ ಪ್ರಸ್ತಾವವನ್ನು ಮುಂದಿಟ್ಟಾಗ ಅಂದಿನ ಪ್ರಭುತ್ವ  ನಿರಾಕರಿಸಿತ್ತು. ಈಗ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಇಟ್ಟಿದ್ದ ಹಣವನ್ನು ಕಡಿತಗೊಳಿಸುವ ಮೂಲಕ ಇಂದಿನ ಪ್ರಭುತ್ವ ಸಹ ಅದೇ ಕೆಲಸ ಮಾಡುತ್ತಿದೆ’ ಎಂದು ದೂರಿದರು.

‘ಶಿಕ್ಷಣ, ಸ್ವಾತಂತ್ರ್ಯ ಚಳವಳಿಯ ಪ್ರಮುಖ ಬೇಡಿಕೆಯಾಗಿತ್ತು. ಆದರೆ, ಸ್ವಾತಂತ್ರ್ಯ ಬಂದು ಸಂವಿಧಾನ ಜಾರಿಯಾದ ಮೇಲೆ ಈ ಬೇಡಿಕೆಯನ್ನು ಈಡೇರಿಸಲು ಸ್ಪಷ್ಟ ಕಾರ್ಯಕ್ರಮಗಳನ್ನು ರೂಪಿಸಲಿಲ್ಲ’ ಎಂದರು.

‘ಕೊಠಾರಿ ಶಿಕ್ಷಣ ಆಯೋಗವು 1966ರಲ್ಲಿ ವರದಿ ಸಲ್ಲಿಸಿತು. ಅದರಲ್ಲಿ, ದೇಶದಲ್ಲಿ ಅಸಮಾನತೆಯ ಶಿಕ್ಷಣ ವ್ಯವಸ್ಥೆ ಇದೆ. ಬಡವರು, ಶ್ರೀಮಂತರ ಮಕ್ಕಳು ಪ್ರತ್ಯೇಕವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದೇಶದ ಭವಿಷ್ಯದ ದೃಷ್ಟಿಯಿಂದ ಇದು ಅಪಾಯಕಾರಿ. ಹೀಗಾಗಿ ಸಮಾನತೆಯ ಆಧಾರದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಹೇಳಲಾಗಿತ್ತು’ ಎಂದು ಹೇಳಿದರು.

‘ಶಿಕ್ಷಣ, ಆಧುನಿಕ ಅಸ್ಪೃಶ್ಯತೆಯನ್ನು ಹಟ್ಟುಹಾಕಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಶೇ 90ರಷ್ಟು ಮಕ್ಕಳು ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಈ ಸಮಸ್ಯೆಯನ್ನು ಬಗೆಹರಿಸಲು ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರವಾಗಿ ಬದಲಾವಣೆ ತರಬೇಕು’ ಎಂದರು.

‘ಸಮಾನ ಶಿಕ್ಷಣದ ಜತೆಗೆ ಶಿಕ್ಷಣ ಮಾಧ್ಯಮ ಯಾವುದಾಗಬೇಕು ಎಂಬ ಬಗ್ಗೆಯೂ ಹೋರಾಟ ನಡೆಸಬೇಕು. ಶಿಕ್ಷಣ ಮಾಧ್ಯಮದ ವಿಷಯದಲ್ಲಿ ನ್ಯಾಯಾಲಯಗಳು ಸೋತಿವೆ. ಭಾಷೆ, ಬದುಕು, ಶಿಕ್ಷಣಕ್ಕಿರುವ ಸಂಬಂಧವನ್ನು ನ್ಯಾಯಾಲಯಗಳು ಅರ್ಥ ಮಾಡಿಕೊಂಡಿಲ್ಲ.

ಬಹುತೇಕ ಶಿಕ್ಷಣ ಸಂಸ್ಥೆಗಳನ್ನು ಸಂಸದರೇ ನಡೆಸುತ್ತಿರುವುದರಿಂದ ತಮ್ಮ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ಅವರು ಇದನ್ನು ಸಂಸತ್ತಿನಲ್ಲಿ ಚರ್ಚೆ ಮಾಡುತ್ತಿಲ್ಲ. ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ದೂರಿದರು.

ವಕೀಲರಾದ ಹೇಮಲತಾ ಮಹಿಷಿ ಮಾತನಾಡಿ, ‘ಶಿಕ್ಷಣದಲ್ಲಿರುವ ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ’ ಎಂದು ಹೇಳಿದರು.

‘ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದರೆ ಏನು ಪ್ರಯೋಜನ ಇದೆ ಎಂಬ ಭಾವನೆ ಇಂದಿಗೂ ಬಹುತೇಕ ಪೋಷಕರ ಮನಸ್ಸಿನಿಂದ ಹೋಗಿಲ್ಲ. ಮಹಿಳೆಗೆ ಶಿಕ್ಷಣ ನೀಡದ ಹೊರತು ಸಮಾಜದ ವಿಕಾಸ ಸಾಧ್ಯವಿಲ್ಲ’ ಎಂದರು.

‘ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಯಾವ ವಿಷಯಗಳೂ ಇಂದಿನ ಪಠ್ಯಪುಸ್ತಕದಲ್ಲಿಲ್ಲ. ಅಲ್ಲದೇ, ಹೆಣ್ಣು ಮಕ್ಕಳಿಗೆ ಕೌಶಲ ತರಬೇತಿಯನ್ನು ನೀಡಬೇಕಾಗಿರುವುದು ಸಹ ಇಂದಿನ ಪ್ರಮುಖ ಆದ್ಯತೆಯಾಗಿದೆ’ ಎಂದರು.

* * *
ಸಾಹಿತಿಗಳ ಮೇಲೆ ನನಗೆ ಗೌರವ ಇದೆ. ಈವರೆಗೆ ನೀವು ಹಲವು ವಿಷಯಗಳ ಬಗ್ಗೆ ಬರೆದಿದ್ದೀರಿ. ಆದರೆ, ಇನ್ನು ಮುಂದೆ ಶಿಕ್ಷಣದ ವಿಷಯನ್ನು ಗಂಭೀರವಾಗಿ ಪರಿಗಣಿಸಿ, ಸಮಾನ ಶಿಕ್ಷಣಕ್ಕೆ ಹೋರಾಟ ನಡೆಸಬೇಕು.
-ಡಾ.ವಿ.ಪಿ.ನಿರಂಜನಾರಾಧ್ಯ,
ಶಿಕ್ಷಣ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.