ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ ‘ಸೈಕೊ’ ಶಂಕರ್ ಪತ್ತೆಗೆ ಸುಳಿವು ನೀಡಿದ್ದ ಬನಶಂಕರಿ ನಿವಾಸಿ ಅಬ್ದುಲ್ ಮುದಾಸಿರ್ ಪಾಷಾ ಅವರಿಗೆ ಪೊಲೀಸ್ ಇಲಾಖೆಯಿಂದ ₨ 5 ಲಕ್ಷ ಬಹುಮಾನ ವಿತರಿಸಲಾಯಿತು. ನಗರ ಉತ್ತರ ವಿಭಾಗದ ಪೊಲೀಸರು ಮಲ್ಲೇಶ್ವರ ಆಟದ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಕಳವು ಮಾಲುಗಳನ್ನು ಹಿಂದಿರುಗಿಸುವ ಪರೇಡ್ನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ಬಹುಮಾನದ ಚೆಕ್ ವಿತರಿಸಿದರು.
2013ರ ಸೆ.1ರಂದು ‘ಸೈಕೊ’ ಶಂಕರ್ ಜೈಲಿನಿಂದ ಪರಾರಿಯಾಗಿದ್ದ. ಆರೋಪಿ ಪತ್ತೆಗೆ ಮಾಹಿತಿ ನೀಡುವವರಿಗೆ ₨ 5 ಲಕ್ಷ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಮುದಾಸಿರ್ ಪಾಷಾ ನೀಡಿದ ಸುಳಿವಿನ ಆಧಾರದ ಮೇಲೆ ಪೊಲೀಸರು ಆತನನ್ನು ಸೆ.6 ರಂದು ಕೂಡ್ಲುಗೇಟ್ ಬಳಿ ಬಂಧಿಸಿದ್ದರು.
ಬಹುಮಾನ ಸ್ವೀಕರಿಸಿ ಮಾತನಾಡಿದ ಮುದಾಸಿರ್ ಪಾಷಾ, ‘2012ರಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಜೈಲು ಸೇರಿದ್ದೆ. ಅದೇ ವರ್ಷ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದೆ. ಜೈಲಿನಲ್ಲಿದ್ದಾಗ ಸೈಕೊ ಶಂಕರ್ ಪಕ್ಕದ ಬ್ಯಾರಕ್‌ನಲ್ಲೇ ನಾನು ಇದ್ದೆ. ಆಗ ಆತನ ಪರಿಚಯವಾಗಿತ್ತು. ಆ ಸಂದರ್ಭದಲ್ಲಿ ಆತ ನನ್ನ ಮೊಬೈಲ್ ಸಂಖ್ಯೆ ಪಡೆದಿದ್ದ’ ಎಂದು ಹೇಳಿದರು.
‘ಜೈಲಿನಿಂದ ಪರಾರಿಯಾದ ಐದು ದಿನಗಳ ನಂತರ ಆತ ನನ್ನ ಮೊಬೈಲ್‌ಗೆ ಕರೆ ಮಾಡಿದ್ದ. ತಾನು ಕೂಡ್ಲುಗೇಟ್ ಬಳಿಯ ಗುಡಿಸಲಿನಲ್ಲಿದ್ದು ಊಟ ಹಾಗೂ ಬೈಕ್ ತೆಗೆದುಕೊಂಡು ಬರುವಂತೆ ಆತ ತಿಳಿಸಿದ್ದ. ಈ ವಿಷಯವನ್ನು ಕೂಡಲೆ ಪೊಲೀಸರಿಗೆ ತಿಳಿಸಿದೆ’ ಎಂದರು. ಮುದಾಸಿರ್ ಪಾಷಾ ಕಟ್ಟಡ ನಿರ್ಮಾಣ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದಾರೆ.
ಸಾರ್ವಜನಿಕರ ಸಹಕಾರ ಅಗತ್ಯ: ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ‘ಅಪರಾಧ ಪ್ರಕರಣಗಳನ್ನು ತಗ್ಗಿಸಲು ಪೊಲೀಸರು ಸಾರ್ವಜನಿಕರೊಂದಿಗೆ ಸಹಕರಿಸಬೇಕಾದ್ದು ಅಗತ್ಯ. ನಗರದಲ್ಲಿ ಅಪರಾಧ ಪ್ರಕರಣಗಳನ್ನು ತಗ್ಗಿಸಲು ಪೊಲೀಸರು ಸಾಕಷ್ಟು ಶ್ರಮ ಪಡುತ್ತಿದ್ದಾರೆ’ ಎಂದರು.
ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಮಾತನಾಡಿ, ‘ಉತ್ತರ ವಿಭಾಗದ ಪೊಲೀಸರು ಎರಡು ತಿಂಗಳಲ್ಲಿ 178 ಪ್ರಕರಣಗಳನ್ನು ಭೇದಿಸಿ, 107 ಮಂದಿ ಆರೋಪಿಗಳನ್ನು ಬಂಧಿಸಿ ₨ 4.2 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ’ ಎಂದು ತಿಳಿಸಿದರು. ಆರೋಪಿಗಳಿಂದ ವಶಪಡಿಸಿಕೊಂಡ ವಸ್ತುಗಳನ್ನು ಅವುಗಳ ಮಾಲೀಕರಿಗೆ ಹಿಂದಿರುಗಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.