ಬೆಂಗಳೂರು: ‘ಹನಿಗವನ ಹಾಗೂ ಚುಟುಕುಗಳು ಸುಭಾಷಿತಗಳಿದ್ದಂತೆ. ಕಿರಿದರಲ್ಲಿ ಹಿರಿಯ ಅರ್ಥ ಹೇಳುವುದು ಹನಿಗವನ ಹಾಗೂ ಚುಟುಕುಗಳ ವೈಶಿಷ್ಟ್ಯ’ ಎಂದು ಸಾಹಿತಿ ಎಂ.ಎನ್.ವ್ಯಾಸರಾವ್ ಅಭಿಪ್ರಾಯಪಟ್ಟರು.
ಅಂಕಿತ ಪುಸ್ತಕ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಜೋಗಿ ಅವರ ‘ಚೈತ್ರ ವೈಶಾಖ ಋತು’, ಎನ್.ಸಂಧ್ಯಾರಾಣಿ ಸಂಪಾದಿಸಿರುವ ‘ಜೋಗಿ ರೀಡರ್’, ಎಚ್.ಡುಂಡಿರಾಜ್ ಅವರ ‘ಹನಿವಾಹಿನಿ’ ಮತ್ತು ಎಸ್.ಸುರೇಂದ್ರನಾಥ್ ಅವರ ‘ತಾಪತ್ರಯಗಳು’ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಹನಿಗವನ ಹಾಗೂ ಚುಟುಕುಗಳು ನೋಡಲು ಲಘುವಾಗಿ ಕಾಣಬಹುದು. ಆದರೆ, ಅವುಗಳ ಅರ್ಥವಿಸ್ತಾರ ಹಿರಿದಾಗಿರುತ್ತದೆ. ಕನ್ನಡದಲ್ಲಿ ಹನಿಗವನ ಪ್ರಕಾರಕ್ಕೆ ಡುಂಡಿರಾಜ್ ಅವರ ಕೊಡುಗೆ ಅಪಾರ’ ಎಂದು ಅವರು ತಿಳಿಸಿದರು.
ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ‘ಶಬ್ದಗಳ ಮೂಲಕ ಕಚಗುಳಿ ಇಡುವ ಪ್ರತಿಭೆ ಡುಂಡಿರಾಜ್. ಇಲ್ಲಿಯವರೆಗೂ ಅವರು ಹಾಸ್ಯ, ಕಚಗುಳಿಯ ಹನಿಗವನ ಬರೆದಿದ್ದಾರೆ. ಇನ್ನು ಸರ್ವಜ್ಞನ ಮಾದರಿಯಲ್ಲಿ ಬರೆಯಲು ಅವರು ಪ್ರಯತ್ನಿಸಬೇಕು’ ಎಂದರು.
‘ಹೆಚ್ಚು ಓದಿ ಹೆಚ್ಚು ಬರೆಯುವವರು ಜೋಗಿ. ಬರವಣಿಗೆಯಲ್ಲಿ ಅಪಾರ ಏಕಾಗ್ರತೆ ಸಾಧಿಸಿರುವವರು ಅವರು. ಅವರದ್ದು ಸಮೃದ್ಧವಾದ ಬರವಣಿಗೆ. ಆದರೆ, ಸುರೇಂದ್ರನಾಥ್ ಹೆಚ್ಚು ಓದಿ ಕಡಿಮೆ ಬರೆಯುವವರು. ದಾವಣಗೆರೆ ಪ್ರದೇಶದ ಭಾಷೆಯನ್ನು ತಮ್ಮ ಬರವಣಿಗೆಯಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟವರು ಅವರು’ ಎಂದು ಹೇಳಿದರು.
ಹನಿಗವಿ ಡುಂಡಿರಾಜ್, ‘ಇದು ವಾಹಿನಿಗಳ ಕಾಲ. ಹೀಗಾಗಿ ನನ್ನ ಹನಿಗವನಗಳ ಸಂಕಲನಕ್ಕೆ ಹನಿವಾಹಿನಿ ಎಂದು ಹೆಸರಿಟ್ಟಿದ್ದೇನೆ. ಹನಿಗವನದಲ್ಲೂ ದಾರ್ಶನಿಕತೆ, ಲೋಕದೃಷ್ಟಿ ಇರುತ್ತದೆ’ ಎಂದರು. ಪುಸ್ತಕಗಳ ಬೆಲೆ: ಚೈತ್ರ ವೈಶಾಖ ಋತು (ಕಾದಂಬರಿ) ₨120, ಜೋಗಿ ರೀಡರ್ (ಲೇಖನ ಸಂಕಲನ) ₨195, ಹನಿವಾಹಿನಿ (ಹನಿಗವಿತೆಗಳು) ₨ 95 ಮತ್ತು ತಾಪತ್ರಯಗಳು (ಕಥಾ ಸಂಕಲನ) ₨ 120.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.