ADVERTISEMENT

‘ಹೊರಗುತ್ತಿಗೆ ತಡೆಗೆ ಹೋರಾಟ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 20:28 IST
Last Updated 24 ಸೆಪ್ಟೆಂಬರ್ 2013, 20:28 IST

ಬೆಂಗಳೂರು: ಎಲ್ಲ ಹುದ್ದೆಗಳನ್ನು ಹೊರಗುತ್ತಿಗೆಗೆ ನೀಡುವ ಪದ್ದತಿ ಅನು­ಸರಿಸಲು ರಾಜ್ಯ ಸರ್ಕಾರ ನಿಧಾನವಾಗಿ ಮುಂದಾಗುತ್ತಿದೆ. ಇದನ್ನು ತಡೆಯಲು ಹೋರಾಡುವ ಅವಶ್ಯಕತೆ ಇದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾ­ಯತ್‌ ನೌಕರರ ಸಂಘದ ರಾಜ್ಯ ಸಮಿತಿಯ ಅಧ್ಯಕ್ಷ ಮಾರುತಿ ಮಾನ್ಪಡೆ ಅಭಿಪ್ರಾಯಪಟ್ಟರು.

ಶನಿವಾರ ನಗರದಲ್ಲಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಗ್ರಾಮ ಪಂಚಾಯತ್‌ ನೌಕರರ ಬೆಂಗಳೂರು ನಗರ ಜಿಲ್ಲಾ ಪ್ರಥಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಎಲ್ಲಾ ಹುದ್ದೆಗಳನ್ನು ಕಾಯಂಗೊಳಿಸುವುದರ ಬದಲಿಗೆ, ಹೊರ ಗುತ್ತಿಗೆಗೆ ನೀಡಲು ಮುಂದಾಗಿದೆ. ೧೫ ವರ್ಷಗಳಿಂದ ಈ ನೀತಿ ಅನುಸರಿಸುತ್ತಿರುವ ಸರ್ಕಾರ ರಾಜ್ಯದಲ್ಲಿ ಈಗಾಗಲೇ ಲಕ್ಷಕ್ಕೂ ಹೆಚ್ಚು  ಹುದ್ದೆಗಳನ್ನು ಹೊರಗುತ್ತಿಗೆಗೆ ನೀಡಿದೆ. ಇದರಿಂದಾಗಿ ರಾಜ್ಯದಲ್ಲಿ ದುಡಿಯುವ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

ರಾಜ್ಯ– ಕೇಂದ್ರ ಸರ್ಕಾರಕ್ಕೆ  ಶ್ರೀಮಂತರು ಪಾವತಿಸಬೇಕಿದ್ದ ಕೋಟ್ಯಂತರ ರೂಪಾಯಿ ತೆರಿಗೆ ಮನ್ನಾ ಮಾಡಿರುವ ಸರ್ಕಾರ, ಗ್ರಾಮ ಪಂಚಾಯಿತಿ ನೌಕರರಿಗೆ ತಿಂಗಳಿಗೆ ಸರಿಯಾಗಿ ವೇತನ ನೀಡದೆ, ಸೇವಾ ಭದ್ರತೆ ಹಾಗೂ ಇತರೆ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ದೂರಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವಹಣ ಅಧಿಕಾರಿ ಬೆಟ್ಟಸ್ವಾಮಿ ಮಾತನಾಡಿ, ಜಿಲ್ಲಾ ವ್ಯಾಪ್ತಿಗೆ ಬರುವ ಗ್ರಾಮ ಮಂಚಾಯಿತಿ ನೌಕರರಿಗೆ ಬಡ್ತಿ ಹಾಗೂ ಕನಿಷ್ಠ ವೇತನ ಜಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಅಧ್ಯಕ್ಷ ಗೋಪಾಲ­ಕೃಷ್ಣ ಅರಳಹಳ್ಳಿ, ಉಪಾಧ್ಯಕ್ಷ ನಂಜಾರೆಡ್ಡಿ, ಪ್ರಧಾನ ಕಾಯದರ್ಶಿ ಎಸ್.ಅಶ್ವಥ ನಾರಾಯಣ, ನರಸಿಂಹ­ಮೂರ್ತಿ, ಹನುಮರಾಜ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.