ADVERTISEMENT

ಬೈಕ್ ಅಡ್ಡಗಟ್ಟಿ ₹24 ಲಕ್ಷ ದರೋಡೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 19:33 IST
Last Updated 11 ಡಿಸೆಂಬರ್ 2018, 19:33 IST

ಬೆಂಗಳೂರು: ವಿಲ್ಸನ್ ಗಾರ್ಡನ್ 7ನೇ ಅಡ್ಡ ರಸ್ತೆಯಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಗಳು ದೇವೇಂದ್ರ ಹಾಗೂ ಮಂಜುನಾಥ್ ಎಂಬುವರ ಮೇಲೆ ಹಲ್ಲೆ ನಡೆಸಿ ₹ 24 ಲಕ್ಷ ಹಣವಿದ್ದ ಬ್ಯಾಗ್ ಕಿತ್ತುಕೊಂಡು ಹೋಗಿದ್ದಾರೆ.

ವಿಲ್ಸನ್‌ ಗಾರ್ಡನ್‌ನ ವಿನಾಯಕ ನಗರದಲ್ಲಿರುವ ‘ರೈಟರ್ಸ್ ಸೇಫ್ ಗಾರ್ಡ್‌’ ಏಜೆನ್ಸಿಯ ನೌಕರರಾದ ದೇವೇಂದ್ರ ಹಾಗೂ ಮಂಜುನಾಥ್, ರಾತ್ರಿ 10 ಗಂಟೆ ಸುಮಾರಿಗೆ ಹಣ ತೆಗೆದುಕೊಂಡು ಕಚೇರಿಗೆ ತೆರಳುತ್ತಿದ್ದರು. ಈ ವೇಳೆ ಮೂರು ಬೈಕ್‌ಗಳಲ್ಲಿ ಹಿಂಬಾಲಿಸಿ ಬಂದು ಅವರನ್ನು ಅಡ್ಡಗಟ್ಟಿದ ಆರು ಮಂದಿ, ಹೆಲ್ಮೆಟ್ ಹಾಗೂ ರಾಡ್‌ನಿಂದ ಹಲ್ಲೆ ನಡೆಸಿ ಹಣ ಕಿತ್ತುಕೊಂಡು ಹೋಗಿದ್ದಾರೆ. ದೇವೇಂದ್ರ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಆರು ಹೊಲಿಗೆಗಳನ್ನು ಹಾಕಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಏಜೆನ್ಸಿಯು ಬ್ಯಾಂಕ್‌ಗಳಿಂದ ಹಣ ಸಂಗ್ರಹಿಸಿ ಎಟಿಎಂ ಘಟಕಗಳಿಗೆ ತುಂಬುವ ಕೆಲಸ ಮಾಡುತ್ತದೆ. ಜತೆಗೆ, ವಿವಿಧ ಕಂಪನಿಗಳು, ಪ್ರಮುಖ ಕಚೇರಿಗಳು ಹಾಗೂ ಮಳಿಗೆಗಳಿಂದಲೂ ಹಣ ಸಂಗ್ರಹಿಸಿ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುತ್ತದೆ. ದೇವೇಂದ್ರ ಮತ್ತು ಮಂಜುನಾಥ್ ಐದು ವರ್ಷಗಳಿಂದ ಇಲ್ಲಿ ಕ್ಯಾಷ್ ಪಿಕ್ಕರ್‌ಗಳಾಗಿ (ಹಣ ಸಂಗ್ರಹಿಸುವವರು) ಕೆಲಸ ಮಾಡುತ್ತಿದ್ದಾರೆ.

ADVERTISEMENT

‘ಏಜೆನ್ಸಿ ವ್ಯವಹಾರದ ಬಗ್ಗೆ ಗೊತ್ತಿರುವವರೇ ಸಂಚು ರೂಪಿಸಿ ಕೃತ್ಯ ಎಸಗಿರುವ ಶಂಕೆ ಇದೆ’ ಎಂದು ವಿಲ್ಸನ್ ಗಾರ್ಡನ್ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.