ADVERTISEMENT

ಇಬ್ಬರ ಬಂಧನ: ₹ 10 ಲಕ್ಷ ಮೌಲ್ಯದ ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 19:02 IST
Last Updated 15 ಜುಲೈ 2019, 19:02 IST
   

ಬೆಂಗಳೂರು: ಸರಗಳವು, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಮಂಗಮ್ಮನಪಾಳ್ಯದ ನಿವಾಸಿಗಳಾದ ಸಲ್ಮಾನ್ ಖಾನ್ ಅಲಿಯಾಸ್‌ ಚಾಂದ್ ಪಾಷಾ (22) ಮತ್ತು ಅರ್ಬಾಜ್ ಖಾನ್ (22) ಬಂಧಿತರು. ಆರೋಪಿಗಳಿಂದ ₹ 10 ಲಕ್ಷ ಮೌಲ್ಯದ 209 ಗ್ರಾಂ ತೂಕದ ಎಂಟು ಚಿನ್ನದ ಮಾಂಗಲ್ಯ ಸರ, 4 ಕೆ.ಜಿ ಬೆಳ್ಳಿ ಸಾಮಗ್ರಿ, ₹ 9,500 ನಗದು ಮತ್ತು ಕೃತ್ಯಕ್ಕೆ ಬಳಸಿದ ಚಾಕು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಸಾರಕ್ಕಿ ಮಾರ್ಕೆಟ್ ಹತ್ತಿರ ಇರುವ ವಾಸವಿ ಆಸ್ಪತ್ರೆಯ ಬಳಿ ಜೂನ್‌ 6 ರಂದು ವೇಣುಗೋಪಾಲ್‌ ಎಂಬವರನ್ನು ಬೆದರಿಸಿ, ₹ 37,450 ಕಿತ್ತುಕೊಂಡು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು, ಈ ಇಬ್ಬರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ADVERTISEMENT

ಬಂಧಿತರು ಕುಮಾರಸ್ವಾಮಿ ಲೇಔಟ್ ಮತ್ತು ಬಸವನಗುಡಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ತಲಾ ಎರಡು ಪ್ರಕರಣ, ತಲಘಟ್ಟಪುರ, ಪುಟ್ಟೇನಹಳ್ಳಿ, ಸಿದ್ದಾಪುರ, ಸಿ.ಕೆ. ಅಚ್ಚುಕಟ್ಟು, ಹನುಮಂತ ನಗರ ಮತ್ತು ಹುಳಿಮಾವು ಪೊಲೀಸ್ ಠಾಣೆಗಳ ತಲಾ ಒಂದು ಸರಗಳವು ಮತ್ತು ಸುಲಿಗೆ ಪ್ರಕರಣ ಸೇರಿ ಒಟ್ಟು 10 ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.