ADVERTISEMENT

10ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

ಐಸಿಡಿಎಸ್ ಖಾಸಗೀಕರಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 19:43 IST
Last Updated 1 ಜುಲೈ 2013, 19:43 IST

ಬೆಂಗಳೂರು: ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್)ಯನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಇದೇ 10ಕ್ಕೆ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ನಿರ್ಧರಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮೀ, ದೇಶದಲ್ಲಿ ಒಟ್ಟು 1.8ಕೋಟಿ ಮಹಿಳೆಯರು ಹಾಗೂ 8 ಕೋಟಿ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿದ್ದು, ಯೋಜನೆಗೆ ವರ್ಷಕ್ಕೆ 3 ಲಕ್ಷ ಕೋಟಿ ಅನುದಾನ ಬೇಕಾಗುತ್ತದೆ ಎಂದು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ತಿಳಿಸಲಾಗಿದೆ ಎಂದರು. 

3 ಲಕ್ಷ ಕೋಟಿ ಅನುದಾನದಲ್ಲಿ ಕೇವಲ 1.23 ಕೋಟಿ ಮಾತ್ರ ನೀಡಿರುವ ಕೇಂದ್ರ ಸರ್ಕಾರ ಉಳಿದ ಹಣವನ್ನು ನೀಡಲಾಗದೆ ಯೋಜನೆಯನ್ನೇ ಖಾಸಗೀಕರಣಗೊಳಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಐಸಿಡಿಎಸ್‌ನ ಶೇಕಡ 10ರಷ್ಟು ಯೋಜನೆಗಳನ್ನು ಸ್ವಯಂ ಸೇವಾ ಸಂಘ ಹಾಗೂ ಶೇಕಡ 10 ರಷ್ಟು ಯೋಜನೆಗಳನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲು ಚಿಂತನೆ ನಡೆಸಿದೆ ಎಂದು ಆರೋಪಿಸಿದರು.

ಜೊತೆಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರವನ್ನು ನೀಡುವ ಬದಲಿಗೆ ಪೌಷ್ಟಿಕತೆಯ ಬಗ್ಗೆ ಶಿಕ್ಷಣ ಹಾಗೂ ಸಲಹೆಗಳನ್ನು ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಮನವಿ ಮಾಡಿದೆ ಎಂದರು.  ಈಗಾಗಲೇ ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಅಲ್ಲಿ ಆಹಾರ ನೀಡುವುದನ್ನು ನಿಲ್ಲಿಸಿದರೆ ಯಾವ ಮಗುವೂ ಅಂಗನವಾಡಿಯತ್ತ ಮುಖ ಮಾಡದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಖಾಸಗೀಕರಣದಿಂದಾಗಿ ಐಸಿಡಿಎಸ್ ಒಂದು ಸ್ವರೂಪವಾಗಿ ಉಳಿಯುವುದಿಲ್ಲ. ದಿನ ಕಳೆದಂತೆ ನಿರ್ಲಕ್ಷಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಿದೆ. ಇದರಿಂದ ಅಪೌಷ್ಟಿಕತೆ, ರಕ್ತ ಹೀನತೆಯಿಂದ ಬಳಲುತ್ತಿರುವ ಗರ್ಭಿಣಿಯರು ಹಾಗೂ ಮಕ್ಕಳು ತೊಂದರೆಗೊಳಗಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು. ಜುಲೈ 10ರಂದು ದೇಶದಾದ್ಯಂತ ಅಂಗನವಾಡಿ ನೌಕರರು ಏಕ ಕಾಲದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಐಸಿಡಿಎಸ್ ಯೋಜನೆಯನ್ನು ಖಾಸಗೀಕರಣಗೊಳಿಸದಂತೆ ಒತ್ತಾಯಿಸಲಿದ್ದಾರೆ ಎಂದು ತಿಳಿಸಿದರು. 

ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದ, ಸಹ ಕಾರ್ಯದರ್ಶಿ ಎಸ್.ಸರೋಜ ಹಾಗೂ ಖಜಾಂಚಿ ಜಿ.ಕಮಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.