ADVERTISEMENT

10ರಿಂದ ತರಳಬಾಳು ಹುಣ್ಣಿಮೆ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 19:40 IST
Last Updated 2 ಫೆಬ್ರುವರಿ 2011, 19:40 IST

ಬೆಂಗಳೂರು: ಸಿರಿಗೆರೆಯ ತರಳಬಾಳು ಬೃಹನ್ಮಠವು ಹಲವು ದಶಕಗಳಿಂದ ಆಚರಿಸಿಕೊಂಡು ಬರುತ್ತಿರುವ ‘ತರಳಬಾಳು ಹುಣ್ಣಿಮೆ ಮಹೋತ್ಸವ’ ಇದೇ 10ರಿಂದ 18ರವರೆಗೆ ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ. ಒಂಬತ್ತು ದಿನಗಳ ಮಹೋತ್ಸವದಲ್ಲಿ ಧಾರ್ಮಿಕ ವಿಷಯಗಳ ಕುರಿತು ಉಪನ್ಯಾಸ, ಚರ್ಚೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

‘ಜನರಲ್ಲಿ ಭಾವೈಕ್ಯದ ಭಾವನೆ ಮೂಡಿಸಬೇಕು. ಎಲ್ಲ ಜಾತಿ, ಧರ್ಮ, ವರ್ಗದವರನ್ನು ಒಂದುಗೂಡಬೇಕು. ಎಲ್ಲರೂ ಮಾನವತಾವಾದ ಅನುಸರಿಸುವಂತೆ ಮಾಡುವ ನಿಟ್ಟಿನಲ್ಲಿ ಮಹೋತ್ಸವ ಆಯೋಜಿಸಲಾಗಿದೆ’ ಎಂದು ಸಿರಿಗೆರೆ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಹುಣ್ಣಿಮೆ ಮಹೋತ್ಸವದಲ್ಲಿ ವೈಚಾರಿಕ ವಿಚಾರಗಳಿಗೆ ಒತ್ತು ನೀಡಲಾಗಿದೆ. ಎಲ್ಲ ಜಾತಿ, ಧರ್ಮದವರು ಸಹ ಇದರಲ್ಲಿ ಪಾಲ್ಗೊಳ್ಳುತ್ತಾರೆ. 1974ರಲ್ಲಿ ಬೆಂಗಳೂರಿನಲ್ಲಿ ಮಹೋತ್ಸವ ನಡೆದಿತ್ತು. ಇದೀಗ 36 ವರ್ಷಗಳ ಬಳಿಕ ಮತ್ತೆ ಇಲ್ಲಿ ಮಹೋತ್ಸವ ನಡೆಯುತ್ತಿದೆ’ ಎಂದರು.

‘ಧಾರ್ಮಿಕ, ವೈಚಾರಿಕ, ಜಾನಪದ, ಮಾನವೀಯ ಮೌಲ್ಯಗಳು ಸೇರಿದಂತೆ ಹಲವು ಪ್ರಚಲಿತ ವಿಷಯಗಳ ಬಗ್ಗೆ ಪ್ರತಿದಿನ ಸಂಜೆ 6.30ಕ್ಕೆ ಉಪನ್ಯಾಸ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಪ್ರತಿದಿನ ಸುಮಾರು 10,000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ವಿವರಿಸಿದರು.

‘ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ, ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ’ ಎಂದು ವಿವರ ನೀಡಿದರು.

‘ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ನಡೆಯಲಿರುವ ಮಹೋತ್ಸವಕ್ಕೆ ಇದೇ 8ರಂದು ಸಂಜೆ 6.30ಕ್ಕೆ ಚಾಲನೆ ನೀಡಲಾಗುವುದು. ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಸಚಿವ ವಿ.ಸೋಮಣ್ಣ ಪಾಲ್ಗೊಳ್ಳಲಿದ್ದಾರೆ’ ಎಂದರು. ಮಹೋತ್ಸವ ಸಮಿತಿ ಸಂಚಾಲಕ ಕೊಂಡಜ್ಜಿ ಷಣ್ಮುಖಪ್ಪ, ಎಚ್.ಎ. ಷಣ್ಮುಖಪ್ಪ, ಡಾ.ಶಿವಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.