ADVERTISEMENT

10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:35 IST
Last Updated 18 ಸೆಪ್ಟೆಂಬರ್ 2011, 19:35 IST

ಬೆಂಗಳೂರು: ನಗರದ ಇನ್‌ಫೆಂಟ್ರಿ ರಸ್ತೆ ಮತ್ತು ಬಳ್ಳಾರಿ ರಸ್ತೆಯಲ್ಲಿ ಶನಿವಾರ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಸಾರ್ವಜನಿಕರ ಕಾರಿನ ಗಾಜು ಒಡೆದು ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಮೊಬೈಲ್ ಫೋನ್ ದೋಚಿ ಪರಾರಿಯಾಗಿದ್ದಾರೆ.

ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಕಾರಿನ ಗಾಜು ಒಡೆದ ಕಿಡಿಗೇಡಿಗಳು ವಾಹನದಲ್ಲಿದ್ದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಜ್ರದ ಆಭರಣಗಳನ್ನು ಕಳವು ಮಾಡಿರುವ ಘಟನೆ ಇನ್‌ಫೆಂಟ್ರಿ ರಸ್ತೆಯಲ್ಲಿ ನಡೆದಿದೆ.

ಈ ಸಂಬಂಧ ಸಂಜಯನಗರ ನಿವಾಸಿ ಸೈಯದ್ ಎಂಬುವರು ದೂರು ಕೊಟ್ಟಿದ್ದಾರೆ. ಇನ್‌ಫೆಂಟ್ರಿ ರಸ್ತೆಯಗುಲಿಸ್ತಾನ್ ಶಾದಿ ಮಹಲ್‌ನಲ್ಲಿ ಏರ್ಪಡಾಗಿದ್ದ ಸಂಬಂಧಿಕರ ಮದುವೆ ಸಮಾರಂಭಕ್ಕೆ ಪತ್ನಿಯೊಂದಿಗೆ ಬಂದಿದ್ದ ಸೈಯದ್ ಅವರು ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಅವರ ಕಾರಿನ ಕಿಟಕಿ ಗಾಜು ಒಡೆದು ವಾಹನದೊಳಗಿದ್ದ ಆಭರಣಗಳನ್ನು ದೋಚಿದ್ದಾರೆ. ಸೈಯದ್ ದಂಪತಿ ರಾತ್ರಿ 11 ಗಂಟೆ ಸುಮಾರಿಗೆ ಕಾರಿನ ಬಳಿ ಬಂದಾಗ ಆಭರಣಗಳು ಕಳವಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಮರ್ಷಿಯಲ್‌ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಳಾರಿ ರಸ್ತೆಯ ಪಶು ವೈದ್ಯಕೀಯ ಕಾಲೇಜು ಸಮೀಪವೂ ಇದೇ ರೀತಿಯ ಘಟನೆ ನಡೆದಿದ್ದು, ದುಷ್ಕರ್ಮಿಗಳು ವೆಂಕಟೇಶ್ ರಾಮನ್ ಎಂಬುವರ ಕಾರಿನ ಗಾಜು ಒಡೆದು ಮೊಬೈಲ್ ಫೋನ್, ಕ್ರೆಡಿಟ್ ಕಾರ್ಡ್ ಹಾಗೂ ನೂರು ರೂಪಾಯಿ ದೋಚಿದ್ದಾರೆ. ಸಂಜಯನಗರ ನಿವಾಸಿಯಾದ ವೆಂಕಟೇಶ್ ಅವರು ಬೆಳಿಗ್ಗೆ ಬಳ್ಳಾರಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಪಶು ವೈದ್ಯಕೀಯ ಕಾಲೇಜು ಮೈದಾನದಲ್ಲಿ ವಾಯುವಿಹಾರ ಮಾಡುತ್ತಿದ್ದಾಗ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಂಜಯನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.